ಹುಬ್ಬಳ್ಳಿ: ಅಮರಗೋಳದ ಜಗಜ್ಯೋತಿ ಬಸವೇಶ್ವರ ಎ.ಪಿ.ಎಂ.ಸಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಹಾದ್ವಾರ, ಜಾನುವಾರು ಮಾರುಕಟ್ಟೆ ಹಾಗೂ ಈರುಳ್ಳಿ ಸಂಗ್ರಹಣಾ ಗೋದಾಮು ಘಟಕವನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟಿಸಿದರು.
ಏಷ್ಯಾದ ಅತಿದೊಡ್ಡ ಎ.ಪಿ.ಎಂ.ಸಿ ಎಂಬ ಖ್ಯಾತಿ ಹೊಂದಿರುವ ಹುಬ್ಬಳ್ಳಿ ಎ.ಪಿ.ಎಂ.ಸಿ ಗೆ ಸಾಮಾಜಿಕ ಸುಧಾರಕ ಜಗಜ್ಯೋತಿ ಬಸವೇಶ್ವರ ಹೆಸರಿಡಲಾಗಿದೆ. ಇದಕ್ಕೆ ತಕ್ಕಹಾಗೆ ಮುಖ್ಯದ್ವಾರವನ್ನು ನಿರ್ಮಿಸಲಾಗಿದ್ದು, ಉತ್ತರ ಕರ್ನಾಟಕದ ರೈತ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಬಸವಣ್ಣ, ನೇಗಿಲು ಹೊತ್ತ ರೈತ, ಅಲಂಕೃತ ಜೋಡೆತ್ತುಗಳ ಕಾಂಕ್ರೀಟ್ ಮೂರ್ತಿಗಳು ಮಹಾದ್ವಾರದಲ್ಲಿ ಕಂಗೊಳಿಸುತ್ತಿವೆ.
ಇದೇ ಸಂದರ್ಭದಲ್ಲಿ ಸಿ.ಬಿ.ಟಿ ಬಸ್ ನಿಲ್ದಾಣದಿಂದ ಅಮರಗೋಳದ ಎ.ಪಿ.ಎಂ.ಸಿ ಮಾರ್ಗವಾಗಿ ಸುತಗಟ್ಟಿ ಹಾಗೂ ಗಾಮಗಟ್ಟಿಗೆ ತೆರಳುವ ನಗರ ಸಂಚಾರ ಬಸ್ಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ, ಕೈಮಗ್ಗ ಮತ್ತು ಜವಳಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ. ಬ.ಪಾಟೀಲ್ ಮುನೇನಕೂಪ್ಪ, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್, ಶಾಸಕರುಗಳಾದ ಅಬ್ಬಯ್ಯ ಪ್ರಸಾದ್, ಸಲೀಂ ಅಹಮದ್, ಎ.ಪಿ.ಎಂ.ಸಿ ಅಧ್ಯಕ್ಷ ಸುರೇಶ್ ಎಂ ಕಿರೇಸೂರು, ಉಪಾಧ್ಯಕ್ಷ ಬಸವರಾಜ ನಾಯ್ಕರ್, ಹುಡಾ ಅಧ್ಯಕ್ಷ ನಾಗೇಶ್ ಕಲ್ಬುರ್ಗಿ , ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು,ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.