ಹುಬ್ಬಳ್ಳಿ: ಯರಗುಪ್ಪಿ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ಆಗಿರುವುದನ್ನು ನಾನೊಬ್ಬ ಗ್ರಾಮಸ್ಥನಾಗಿ ವಿರೋಧ ವ್ಯಕ್ತಪಡಿಸಿದ್ದು ಸತ್ಯ. ಆವೇಶದಲ್ಲಿ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಪಂಚಾಯತಿ ಸದಸ್ಯನಿಗೆ ಗ್ರಾಮೀಣ ಭಾಷೆಯಲ್ಲಿ ಬೈದಿರೋದಕ್ಕೆ ಕ್ಷಮೆಯಾಚನೆ ಮಾಡುತ್ತೇನೆ ಎಂದು ಕೆಪಿಸಿಸಿ ಸದಸ್ಯ ಷಣ್ಮುಖ ಶಿವಳ್ಳಿ ಹೇಳಿದರು.
ನಗರದಲ್ಲಿಂದು ಸುದ್ದಿಗೊಷ್ಠಿ ಏರ್ಪಡಿಸಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯತಿ ಸದಸ್ಯನಿಗೆ ಬೈದಿರುವ ವೈರಲ್ ಆದ ಆಡಿಯೋ ಕುರಿತು ಇಂದು ಸ್ಪಷ್ಟನೆ ನೀಡಿದರು.
ಯರಗುಪ್ಪಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರ ಗಮನಕ್ಕೆ ಬರದೇ ಪಿಡಿಓ ಒಳಗೊಂಡು ಕೆಲವು ಸದಸ್ಯರು ಊರಿನ ಕೆರೆ ಅಭಿವೃದ್ಧಿ, ರೈತರ ಹೊಲಗಳ ಬದವು ಹಾಕುವ ಕಾಮಗಾರಿ ಹೆಸರಿನಲ್ಲಿ ಸುಮಾರು 13 ಲಕ್ಷ ರೂ ಅವ್ಯವಹಾರ ಮಾಡಿದ್ದಾರೆ. ಈ ಬಗ್ಗೆ ನನ್ನ ಗಮನಕ್ಕೆ ಬಂದ ನಂತರ ನಾನೊಬ್ಬ ಗ್ರಾಮದ ನಾಗರಿಕನಾಗಿ ಪಂಚಾಯತಿ ಸದಸ್ಯನಿಗೆ ಮಾತನಾಡಿದ್ದೆ, ಆದರೆ ಆ ಘಟನೆಯನ್ನು ಮುಚ್ಚಿ ಹಾಕಲು ಗ್ರಾಮ ಪಂಚಾಯತಿ ಸದಸ್ಯರು ನನ್ನ ಮೇಲೆ ಇಲ್ಲಸಲ್ಲದ ಸುಳ್ಳು ಹೇಳಿ ತೇಜೋವಧೆ ಮಾಡುವ ಹುನ್ನಾರ ಮಾಡಿದ್ದಾರೆಂದು ಆರೋಪಿಸಿದರು.
ಈಗಾಗಲೇ ಅವ್ಯವಹಾರ ಕುರಿತು ತಾಲೂಕು ದಂಡಾಧಿಕಾರಿಗಳಿಗೆ ದೂರು ನೀಡಲಾಗಿದೆ. ಅವರು ಕೂಡಾ ಗ್ರಾಮ ಪಂಚಾಯತಿಯನ್ನು ಅಡಿಟ್ ಮಾಡಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಗ್ರಾಮದ ಜನರ ಸಮ್ಮುಖದಲ್ಲಿ ಗ್ರಾಮ ಸಭೆ ನಡೆಸಿ ಅವ್ಯವಹಾರ ನಡೆದು ಕುರಿತು ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು. ಇನ್ನೂ ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ನನ್ನ ಸಹೋದರ ಚನ್ನಬಸಪ್ಪ ಶಿವಳ್ಳಿ ಶಾಸಕ, ಸಚಿವನಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅದರಂತೆ ಅವರ ಹೆಸರು ಉಳಿಸುವ ನಿಟ್ಟಿನಲ್ಲಿ ಮುಂದೆ ಈ ತರಹದ ಘಟನೆಗಳು ಗ್ರಾಮದಲ್ಲಿ ಮರು ಕಳಿಸಿದಂತೆ ಗ್ರಾಮವನ್ನು ಮಾದರಿ ಮಾಡುವತ್ತ ಎಲ್ಲರೂ ಒಗ್ಗೂಡಿ ಕೆಲಸ ಮಾಡುವ ಭರವಸೆಯನ್ನು ಇದೇ ವೇಳೆ ನೀಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಹನುಮವ್ವ ಗೊಬ್ಬರಗುಂಪಿ ಮಾತನಾಡಿ, ನಾನು ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಒಂದು ವರ್ಷ ಕಳೆಯುತ್ತಾ ಬಂದಿದೆ. ಈಗಾಗಲೇ ಗ್ರಾಮದ ಅಭಿವೃದ್ಧಿಗಾಗಿ ತಿಂಗಳಿಗೊಮ್ಮೆ ಗ್ರಾಮಸಭೆ ಸೇರಿದಂತೆ ಹಲವಾರು ಸಭೆ ನಡೆಸಿದ್ದೇನೆ. ಆದರೆ ಕೆಲವು ಸದಸ್ಯರು ಸುಳ್ಳು ಹೇಳಿ ನನ್ನ ಸಹಿ ಮಾಡಿಸಿಕೊಂಡು ಅವ್ಯವಹಾರ ಮಾಡಿದ್ದಾರೆ. ಅವರ ವಿರುದ್ಧ ನಾನು ಮೇಲಾಧಿಕಾರಿಗಳಿಗೆ ದೂರು ನೀಡುವೆ ಎಂದು ತಿಳಿಸಿದರು.