ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮೂರು ಮತ್ತು ಐದು ವರ್ಷದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಜ.5 ರಂದು ಬೃಹತ್ ಪ್ರತಿಭಟನೆಯನ್ನು ನವನಗರದ ಕಾನೂನು ವಿಶ್ವವಿದ್ಯಾಲಯದ ಮುಂದೆ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಸ್.ಎಲ್.ಯು ವಿಧ್ಯಾರ್ಥಿ ಸಂತೋಷ ನಂದೂರ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕಳೆದ 29 ದಿನಗಳಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮೂರು ವರ್ಷಗಳ ಕೋರ್ಸ್ ನ್ನು ಮೂರು ವರ್ಷದಲ್ಲಿ, ಐದು ವರ್ಷಗಳ ಕೋರ್ಸನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸಬೇಕು, ಕೋವಿಡ್- 19 ಕಾರಣದಿಂದಾಗಿ ಕರ್ನಾಟಕ ಸರ್ಕಾರ ಮತ್ತು ಯುಜಿಸಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ, ವಿದ್ಯಾರ್ಥಿಗಳ ಒಂದು ವರ್ಷ ಹಾಳಾಗುವ ನಷ್ಟವನ್ನು ಕಡಿಮೆ ಮಾಡಲು, ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ ಗಳಿಗೆ ಮುಂಬಡ್ತಿ ನೀಡಬೇಕೆಂದು ಒತ್ತಾಯಿಸಿ ಸಹೋರಾತ್ರಿ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಪರಿಣಾಮ ಹೋರಾಟಕ್ಕೆ ಮೂರು ವರ್ಷದ ವಿದ್ಯಾರ್ಥಿಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಪೀಠವು ಮುಂದಿನ ವರ್ಷಕ್ಕೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ. ಅದರಂತೆ ಐದು ವರ್ಷದ ವಿದ್ಯಾರ್ಥಿಗಳನ್ನು ಸಂವಿಧಾನದ ಅನುಚ್ಛೇದ 14 ರ ಅಡಿಯಲ್ಲಿ ಮುಂಬಡ್ತಿ ನೀಡಬೇಕು, ಎಲ್ಲರಿಗೂ ಶೈಕ್ಷಣಿಕ ವರ್ಷವನ್ನು ತಕ್ಷಣವೇ ಪ್ರಾರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಾನೂನು ವಿದ್ಯಾರ್ಥಿಗಳ ಪದವೀಧರ ಸಂಘದಿಂದ ಅನಿರ್ಧಿಷ್ಟಾವಧಿ ಹೋರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಈಶ್ವರ ಭಟ್ಟ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಅಧಿಕಾರ ದುರ್ಬಳಕೆ ಕಾರಣದಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅಲ್ಲದೇ ಬೆಂಗಳೂರಿನ ಏಕಪೀಠದ ಮುಂದೆ ರಿಪೀಟರ್ ವಿದ್ಯಾರ್ಥಿಗಳನ್ನು ಸೇರಿಸಿ ಶೇ.76 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ ಎಂದು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ವರದಿ ಸಲ್ಲಿಸಿದ್ದಾರೆ. ಈ ಕಾರಣದಿಂದ ಮೊನ್ನೆ ನಡೆದ ಪರೀಕ್ಷೆಗೆ ಶೇ.70 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿದ್ದು ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರೆಸಲಾಗುತ್ತಿದೆ.ಜ.5 ರಂದು ನಡೆಯುವ ಹೋರಾಟಕ್ಕೆ ರಾಜ್ಯದ ಎಲ್ಲ ಕಾನೂನು ವಿದ್ಯಾರ್ಥಿಗಳು, ರೈತಪರ ಸಂಘಟನೆ ಮುಖ್ಯಸ್ಥರು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸೇರಿದಂತೆ ಮುಂತಾದವರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರುದ್ರೇಶ, ವಿನಯ ಬಿದರಮಳಿ ಇದ್ದರು.