ಹುಬ್ಬಳ್ಳಿ : ಭಾರತೀಯ ಜನತಾ ಪಕ್ಷಕ್ಕೆ ಪಕ್ಷೇತರ ಅಭ್ಯರ್ಥಿಗಳಿಂದ ಯಾವುದೇ ಹಾನಿಯಾಗುವುದಿಲ್ಲ. ಪರಿಷತ್ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಪರಿಷತ್ ಚುನಾವಣೆ ಮತದಾನದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷೇತರ ಅಭ್ಯರ್ಥಿಗಳಿಂದ ಬಿಜೆಪಿಗೆ ಯಾವುದೇ ಹಾನಿಯಿಲ್ಲ. ಅಲ್ಲದೇ ಧಾರವಾಡ, ಗದಗ ಹಾಗೂ ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಪ್ರಚಂಡ ಬಹುಮತವನ್ನು ಪಡೆದುಕೊಂಡು ಗೆಲವು ಸಾಧಿಸುವುದು ನಿಶ್ಚಿತ ಎಂದರು.
ಧಾರವಾಡ ಮತ್ತು ಗದಗ ಕ್ಷೇತ್ರಕ್ಕಿಂತ ಹಾವೇರಿಯಲ್ಲಿಯೇ ಪ್ರದೀಪ ಶೆಟ್ಟರ್ ಹೆಚ್ಚಿನ ಮತವನ್ನು ಪಡೆದುಕೊಳ್ಳುತ್ತಾರೆ. ಅಲ್ಲದೇ ಈಗಾಗಲೇ ಜಿಲ್ಲಾವಾರು ಮಾಹಿತಿಯನ್ನು ಶಾಸಕರಿಂದ ಕಲೆ ಹಾಕಲಾಗಿದ್ದು, ಎಲ್ಲೆಡೆಯೂ ಬಿಜೆಪಿಗೆ ಬೆಂಬಲ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.