ಹುಬ್ಬಳ್ಳಿ : ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಒತ್ತಾಯಿಸಿ ಧಾರವಾಡ ಜಂಟಿ ನಿರ್ದೇಶಕರ ಕಛೇರಿ ಎದುರು ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ , ಇದೇ ದಿ. ೧೦ ರಂದು ಆಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯಾಧ್ಯಕ್ಷ ಪ್ರೊ . ಹನುಮಂತಗೌಡ ಆರ್.ಕಲ್ಕನಿಯವರು ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ೧೪ ಸಾವಿರಕ್ಕೂ ಅಧಿಕ ಉಪನ್ಯಾಸರ ಇದ್ದು, ಅವರಿಗೆ ಸೇವಾ ಭದ್ರತೆ ನೀಡಬೇಕು, ಯು.ಜಿ.ಸಿ ನಿಯಮಾವಳಿಯಂತೆ ವೇತನ ಹೆಚ್ಚಳ ಮಾಡುವುದು , ವರ್ಷದ ಹನ್ನೆರಡು ತಿಂಗಳು ವೇತನ ನೀಡುವುದು ಸೇರಿದಂತೆ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ರಾಜ್ಯ ಸರ್ಕಾರವು ಕಳೆದ ಬಾರಿ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸ.ಪ್ರ.ದ. ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನೀಡಿರುವ ಭರವಸೆಯನ್ನು ತಕ್ಷಣವೇ ಕಾರ್ಯರೂಪಕ್ಕೆ ತರಬೇಕು , ಸ.ಪ್ರ.ದ. ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಮುಖ್ಯಮಂತ್ರಿಯವರು ಹಾಗೂ ಉನ್ನತ ಶಿಕ್ಷಣ ಸಚಿವರು ಅರ್ಥೈಯಿಸಿಕೊಂಡು ಮಾನವೀಯತೆಯ ಆಧಾರದ ಮೇಲೆ ಸೇವಾ ಭದ್ರತೆಯನ್ನು ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಅತೀ ಶೀಘ್ರವಾಗಿ ಆದೇಶ ಹೊರಡಿಸುವಂತೆ ಒತ್ತಾಯಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಹೊಂಕಣ್ಣನವರ, ಪ್ರೊ.ಎಸ್.ವಿ.ಹಿರೇಮ, ಪ್ರೊ.ಶಿವಾನಂದ ಕಲ್ಲೂರು , ಡಾ.ಚಂದ್ರಶೇಖರ ಕಾಳನ್ನವರ, ಪ್ರೊ. ವಿಜಯಲಕ್ಷ್ಮೀ ಜೋಶಿ, ಪ್ರೊ.ಸಂಜು ಸತರೆಡ್ಡಿ , ಪ್ರೊ.ಉಮೇಶ ಬಾಂಡಗೆ , ಪ್ರೊವಾಯ್.ಜಿ ಹಂಚನಾಳ , ಪ್ರೊ. ವಿನೋದ ಪೂಜಾರ, ಪ್ರೋ. ವಿಜಯಲಕ್ಷ್ಮಿ ಜೋಶಿ ಸೇರಿದಂತೆ ಉಪಸ್ಥಿತರಿದ್ದರು.