ಹುಬ್ಬಳ್ಳಿ, : ಹಾನಗಲ್ ಉಪ ಚುನಾವಣೆಯಲ್ಲಿ ಮತದಾರರು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಮತ ನೀಡಿದ್ದಾರೆ. ಈಗಲೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಮತದಾರರು ಹೆಚ್ಚಿನ ಮತ ನೀಡಲಿದ್ದಾರೆ ಎಂದು ಧಾರವಾಡ ವಿಧಾನ ಪರಿಷತ್ ಚುನಾವಣೆ ವೀಕ್ಷಕರು ಹಾಗೂ ಎಐಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ ಹಣ, ಅಧಿಕಾರ, ತೋಳ್ಬಲ ಪ್ರದರ್ಶನ ಮಾಡಿದೆ. ಈ ಚುನಾವಣೆಯಲ್ಲಿಯೂ ಗ್ರಾಮೀಣ ಮಟ್ಟದಲ್ಲಿ ಆಮಿಷಗಳನ್ನು ಒಡ್ಡುವ ಕಾಯಕದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ರಾಜೀವ್ ಗಾಂಧಿ ಅವರು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಕೊಡುವ ಕೆಲಸ ಮಾಡಿದ್ದರು. ಆ ಅಧಿಕಾರ ಉಳಿಸಲು ಹಾಗೂ ಪ್ರಜಾಪ್ರಭುತ್ವ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಬಲಿಷ್ಠಗೊಳಿಸಲು ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಅವರು ಮನವಿ ಮಾಡಿದರು.
ರೈತರ ಬೇಡಿಕೆಗಳನ್ನು ಹತ್ತಿಕ್ಕಲು ಹುನ್ನಾರ ನಡೆದಿತ್ತಾದರೂ ಅದು ಸಾಧ್ಯವಾಗಲಿಲ್ಲ. ಹೀಗಾಗಿ ರೈತ ವಿರೋಧಿ ಕಾಯ್ದೆಗಳನ್ನು ವಾಪಸು ಪಡೆಯಲಾಗಿದೆ. ಅತಿವೃಷ್ಟಿಯಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಮಂತ್ರಿಗಳು ಪರಿಹಾರ ಕೊಡುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ರಾಷ್ಟ್ರದ ಬೆನ್ನಲುಬು ರೈತನ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಅವರು ಒತ್ತಾಯಿಸಿದರು.
ಸಲಿಂ ಅಹ್ಮದ್ ವಿದ್ಯಾರ್ಥಿ ದಿಶೆಯಿಂದಲೂ ನಾಯಕರಾಗಿದ್ದವರು. ಅವರೊಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ. ಅವರಿಗೆ ವಿ.ಪ. ಚುನಾವಣೆಯಲ್ಲಿ ಮತ ನೀಡಬೇಕು ಎಂಬುದು ತಮ್ಮ ಮನವಿಯಾಗಿದೆ ಎಂದು ಅವರು ಹೇಳಿದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ನೀಡಿ ಅಭ್ಯರ್ಥಿ ಸಲಿಂ ಅಹ್ಮದ್ ಅವರಿಗೆ ಗೆಲವು ದೊರಕಿಸಿಕೊಡಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಪ್ರಸಾದ್ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಅನಿಲಕುಮಾರ್ ಪಾಟೀಲ್, ಶಿವಾನಂದ ಕರಿಗಾರ, ಸತೀಶ್ ಮೆಹರವಾಡೆ, ಎಂ.ಎಸ್.ಅಕ್ಕಿ, ಪ್ರಕಾಶ ಬುರಬುರೆ, ಅನೀಲ ಸಾವಂತ್, ರಫೀಕ್ ಸಾವಂತ್ ಉಪಸ್ಥಿತರಿದ್ದರು.
