ಹುಬ್ಬಳ್ಳಿ : ವಕೀಲರ ಮೇಲೆ ನಡೆಯುವ ಕೊಲೆ, ಹಲ್ಲೆ ತಡೆಗಾಗಿ ಭಾರತೀಯ ಬಾರ್ ಕೌನ್ಸಿಲ್ ‘ವಕೀಲರುಗಳ ರಕ್ಷಣಾ ಕರಡು – 2021’ ನ್ನು ಸಿದ್ದಪಡಿಸಿದ್ದು, ಅದನ್ನು ಸಂಪತ್ತಿನ ಉಭಯ ಸದನಗಳಲ್ಲಿ ಮುಂದಿನ ದಿನಗಳಲ್ಲಿ ಮಂಡನೆಗೆ ಸಿದ್ದಗೊಂಡಿರುವುದು ಸ್ವಾಗತಾರ್ಹ, ಆದರೆ ಈ ಕರಡಿನಲ್ಲಿ ಸ್ವಕಾಲತ್ತುದಾರರನ್ನು ಸೇರಿಸದಿರುವುದು ಕಂಡುಬಂದಿದೆ. ಈ ದಿಸೆಯಲ್ಲಿ ಇಂದಿನಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಕರಡಿನಲ್ಲಿ ಸ್ವಕಾಲತ್ತುದಾರರನ್ನು ಸೇರಿಸಬೇಕೆಂದು ಸ್ವಕಾಲತ್ತುದಾರ ಸಚ್ಚಿದಾನಂದ ಪಾಟೀಲ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ವಕೀಲರ ಕಾಯಿದೆ – 1961 ರ ವೃತ್ತಿ ಅಭ್ಯಾಸ ಮಾಡುವ ಹಕ್ಕುಗಳಲ್ಲಿಯ 32 ನೇಯ ಕಲಂ ಅಡಿಯಲ್ಲಿ ನೋಂದಾಯಿತ ವಕೀಲರಲ್ಲದ ಇತರ ಯಾವುದೇ ವ್ಯಕ್ತಿಗಳು ಸಹಿತ ತಾವೇ ಖುದ್ದಾಗಿ ಯಾವುದೇ ನ್ಯಾಯಾಲಯ, ನ್ಯಾಯ ಪ್ರಾಧಿಕಾರ, ನ್ಯಾಯಾಧಿಕರಣದ ಅಧಿಕಾರಿಗಳ ಎದುರು ಹಾಜರಾಗಿ ತಮ್ಮ ಯಾವುದೇ ಪ್ರಕರಣಗಳ ಸ್ವಕಾಲತ್ತು ಮಾಡಲು ಅನುಮತಿಸಲ್ಪಡಬಹುದಾದ ಅಧಿಕಾರವನ್ನು ನ್ಯಾಯಾಲಯಕ್ಕೆ ನೀಡಿದೆ. ಆದರೆ ಕರಡು ಮಾಡಿ 60 ವರ್ಷ ಗತಿಸಿ ಹೋಗಿದರು ಸಹಿತ 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ತಮ್ಮ ಸಮಸ್ಯೆಗಳನ್ನು ನ್ಯಾಯಾಲಯದ ಮುಂದೆ ಹೋಗಿ ಇತ್ಯರ್ಥ ಆಗಿರುವುದು ಶೇ. 0.001ಕ್ಕಿಂತ ಕಡಿಮೆ ಇದೆ.
ಇತ್ತಿಚಿನ ದಿನಗಳಲ್ಲಿ ವಕೀಲರ ಮೇಲೆಯೇ ಹಲ್ಲೇ, ಬೆದರಿಕೆ ಹಾಕುವುದು ಸಹಜವಾಗಿದೆ. ದೆಹಲಿಯಲ್ಲಿ ವಕೀಲರ ಹತ್ಯೆ, ಬಿಹಾರದಲ್ಲಿ ನ್ಯಾಯಾಧೀಶರಿಗೆ ಇನ್ಸ್ಪೆಕ್ಟರ್ ಗನ್ ಇಟ್ಟು ಬೆದರಿಕೆ ಹಾಕಿದ ಘಟನೆಗಳು ನಡೆದಿದೆ. ಹಾಗಾಗಿ ಭಾರತೀಯ ಬಾರ್ ಕೌನ್ಸಿಲ್ ಇದಕ್ಕಾಗಿ ವಕೀಲರುಗಳ ರಕ್ಷಣಾ ಕಾಯಿದೆ – 2021 ಜಾರಿಗೆ ತಂದಿದೆ. ಆದರೆ ಇದರಲ್ಲಿ ಸ್ವಕಾಲತ್ತುದಾರರ ರಕ್ಷಣೆಗೆ ಬಗ್ಗೆ ಉಲ್ಲೇಖ ಮಾಡಿಲ್ಲ. ಪರಿಣಾಮ ಸ್ವಕಾಲತ್ತುದಾರರು ಭಯದ ಛಾಯೆಯಲ್ಲಿರುವಂತಾಗಿದೆ. ಈ ನಿಟ್ಟಿನಲ್ಲಿ ವಕೀಲರುಗಳ ರಕ್ಷಣಾ ಕರಡು – 2021 ರಲ್ಲಿ ಸ್ವಕಾಲತ್ತುದಾರರಿಗೆ ರಕ್ಷಣೆ ನೀಡಬೇಕೆಂದು ಈಗಾಗಲೇ ರಾಷ್ಟ್ರಪತಿಗಳು, ಕೇಂದ್ರದ ಕಾನೂನು ಸಚಿವರು, ಭಾರತೀಯ ಬಾರ್ ಕೌನ್ಸಿಲ್ , ಲೋಲಸಭಾ ವಿಪಕ್ಷ ನಾಯಕರು, ರಾಜ್ಯದ ಕಾನೂನು ಸಚಿವರಿಗೆ ಪತ್ರ ಬರೆಯಲಾಗಿದೆ. ಚಳಿಗಾಲದ ಸಂಸತ್ತ ಅಧಿವೇಶನದಲ್ಲಿ ಈ ಬಗ್ಗೆ ತೀರ್ಮಾನಿಸಬೇಕೆಂದು ಆಗ್ರಹಿಸಿದರು.