ಹುಬ್ಬಳ್ಳಿ: ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ ಕೆಲವೊಂದು ಕಿಡಿಗೇಡಿಗಳು ವ್ಯಾಯಾಮ ಶಾಲೆ, ಕುಸ್ತಿ, ಫಿಟನೆಸ್ ಸೆಂಟರ್ ಹಾಗೂ ಜಿಮ್ ಗೆ ಹೋಗುವುದಿಂದ ಹೃದಯಾಘಾತ ಹೆಚ್ಚಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಇದಕ್ಕೆ ತಲೆಕೊಡದೇ ತಜ್ಞರ ಸಲಹೆ ಮೇರೆಗೆ ಆರೋಗ್ಯ ಸಂಬಂಧಿಸಿದ ವ್ಯಾಯಾಮವನ್ನು ವ್ಯವಸ್ಥಿತವಾಗಿ ಮಾಡಬಹುದೆಂದು ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ಮತ್ತು ಚಲನಚಿತ್ರ ನಟ ಕೃಷ್ಣ ಚಿಕ್ಕತುಂಬಳ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ದಿ.ಪುನೀತ್ ರಾಜಕುಮಾರ ಅವರು ಆಕಸ್ಮಿಕ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಕೆಲವೊಂದು ಕಿಡಗೇಡಿಗಳು ಇದನ್ನೆ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವಿಡಿಯೋ ಮೂಲಕ ಫಿಟನೆಸ್ ಕುರಿತು ಕಾಕತಾಳೀಯ ಅಪನಂಬಿಕೆಯನ್ನು ಸೃಷ್ಟಿಸುತ್ತಿದ್ದಾರೆ. ಯುವಕರು ಹಾಗೂ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಈ ವಿಡಿಯೋಗಳನ್ನು ನೋಡಿ ಹೆದರುವಂತಾಗಿದೆ. ನಟ ಪುನೀತ್ ರಾಜಕುಮಾರ ಅವರ ಹೃದಯಾಘಾತಕ್ಕೂ ಮತ್ತು ಅವರ ಫಿಟನೆಸ್, ಜಿಮ್ ಗೂ ಯಾವುದೇ ಸಂಬಂಧವಿಲ್ಲ ಎಂದರು.
ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಆರೋಗ್ಯ ಸಂಬಂಧಿ ವ್ಯಾಯಾಮ ಮಾಡುತ್ತಾ ಉತ್ತಮ ಆರೋಗ್ಯವನ್ನು ಕಂಡುಕೊಂಡಿದ್ದಾರೆ. ಆರೋಗ್ಯವೇ ಭಾಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ದೇಹದ ಫಿಟನೆಸ್ ಕಾಯ್ದುಕೊಳ್ಳಲು ಉತ್ತಮ ಆಹಾರ ಸೇವನೆ ಜೊತೆಗೆ ಕ್ರಮಬದ್ದವಾಗಿ ವ್ಯಾಯಾಮ ತರಭೇತಿದಾರರ ಮಾರ್ಗಸೂಚಿಯಂತೆ ವರ್ಕ್ ಔಟ್ ಮಾಡಿದರೆ ಯವುದೇ ತೊಂದರೆ ಉಂಟಾಗುವುದಿಲ್ಲ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶರೀಫ್ ಮುಲ್ಲಾ, ಆನಂದ ಕುಮಾರ ಅಂಗಡಿ, ಸುರೇಶ ಮುಳಗುಂದ, ಓಂ ಸಂಗಮೇಶ್ವರ ಐಹೋಳಿ, ವಿ.ಎಸ್.ಗಂಟಿಮಠ ಇದ್ದರು.
ಜಾಹಿರಾತು…