ಹುಬ್ಬಳ್ಳಿ :ತೀವ್ರ ಸಂಚಾರ ದಟ್ಟಣೆ ಇರುವ ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣ ಕುರಿತು ಸಾರ್ವಜನಿಕರು ಹಾಗೂ ವರ್ತಕರ ಸಲಹೆಗಳನ್ನು ಪಡೆಯಲು ರಚಿಸಿದ್ದ ಸಮಿತಿಯು
ಸಾರ್ವಜನಿಕರ ಸಲಹೆಗಳನ್ನಾಧರಿಸಿ ,ಸಮಿತಿ ಸದಸ್ಯರ ಅಭಿಪ್ರಾಯಗಳೊಂದಿಗೆ ವರದಿ ಸಿದ್ಧಪಡಿಸಿದೆ.ಜಿಲ್ಲಾಧಿಕಾರಿಗಳು ಸೇರಿದಂತೆ ಶಾಸಕರು ,ಹಿರಿಯ ಅಧಿಕಾರಿಗಳು ಹಾಗೂ ತಜ್ಞರನ್ನೊಳಗೊಂಡ 13 ಸದಸ್ಯರ ಸಮಿತಿಯು ಈ ವರದಿಯನ್ನು ಶೀಘ್ರದಲ್ಲಿ ಸ್ಥಳೀಯ ಸಂಸದರೂ ಆಗಿರುವ ,ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಅವರಿಗೆ ಸಲ್ಲಿಸಲಿದೆ. ಸಾರ್ವಜನಿಕರಿಗೂ ವರದಿಯ ವಿವರಗಳನ್ನು ಒದಗಿಸಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳು ,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸೆ.25 ರಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಯ ನಿರ್ದೇಶನದಂತೆ ,ಶಾಸಕರಾದ ಅರವಿಂದ ಬೆಲ್ಲದ್,ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ,ನಗರ ಪೊಲೀಸ್ ಆಯುಕ್ತರು, ಮಹಾನಗರಪಾಲಿಕೆ ಆಯುಕ್ತರು,ಹೆಚ್‌ಡಿಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕರು, ಐ.ಐ.ಟಿ , ಬಿ.ವಿ.ಬಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು, ಹೆಸರಾಂತ ನಿರ್ಮಾಣ ಸಂಸ್ಥೆಗಳ ತಜ್ಞರು,ಕೇಂದ್ರ ಭೂಸಾರಿಗೆ ಮಂತ್ರಾಲಯದ ಪ್ರಾದೇಶಿಕ ಮುಖ್ಯ ಅಭಿಯಂತರರು ಸೇರಿದಂತೆ 13 ಜನರ ಸಮಿತಿಯನ್ನು ಅಕ್ಟೋಬರ್ 4 ರಂದು ರಚಿಸಲಾಗಿತ್ತು.
ಈ ಸಮಿತಿಯು ಎರಡು ಬಾರಿ ಸಾರ್ವಜನಿಕ ಭಾಗಿದಾರರ ಸಭೆಗಳು ಮತ್ತು ಮೂರು ಬಾರಿ ಸಮಿತಿ ಸದಸ್ಯರ ಸಭೆಗಳು ಸೇರಿ ಒಟ್ಟು ಐದು ಸಭೆಗಳನ್ನು ನಡೆಸಿ ವಿಸ್ತೃತವಾಗಿ ಚರ್ಚಿಸಿದೆ. ಸಾರ್ವಜನಿಕರು,ವರ್ತಕರು ನೀಡಿದ ಸಲಹೆಗಳನ್ನು ಪಡೆದಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರಗಳನ್ನು ಸಮಿತಿಯು ಸೂಚಿಸಿ ವರದಿ ಸಿದ್ಧಪಡಿಸಿದೆ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಇಂಜಿನೀಯರರು ವಿನ್ಯಾಸ ಮತ್ತು ತಾಂತ್ರಿಕ ಫಿಸಿಬಿಲಿಟಿ ಪರಿಶೀಲಿಸಿದ್ದಾರೆ.ಶೀಘ್ರದಲ್ಲಿಯೇ ವರದಿಯನ್ನು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿಯವರಿಗೆ ಸಲ್ಲಿಸಲಾಗುವುದು. ಸಾರ್ವಜನಿಕರಿಗೂ ಮಾಹಿತಿಗೆ ಒದಗಿಸಲಾಗುವುದು ಎಂದು ಸಮಿತಿ ತಿಳಿಸಿದೆ.