ಹುಬ್ಬಳ್ಳಿ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಗೋಕುಲ್ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗೀತಗಾಯನ ಕಾರ್ಯಕ್ರಮ ಮಾಡಿ , ಶೃಂಗಾರಗೊಳಿಸಲಾಗಿದ್ದ ಬಸ್ಸಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್ ಪಾಟೀಲ ಚಾಲನೆ ನೀಡುವುದರ ಮೂಲಕ ಸರಳವಾಗಿ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ವಿ.ಎಸ್ ಪಾಟೀಲ ಮಾತನಾಡಿ, ಕನ್ನಡ ನಾಡು ನುಡಿ ಸಂಸ್ಕೃತಿ ಹಾಗೂ ವೈವಿಧ್ಯತೆಯನ್ನು ಸ್ಮರಿಸಿ ರಾಜ್ಯೋತ್ಸವದಿಂದ ವರ್ಷಪೂರ್ತಿ ಕನ್ನಡಾಭಿಮಾನವನ್ನು ತೋರಿಸಿ, ದಿನನಿತ್ಯ ಕನ್ನಡ ಭಾಷೆ, ನೆಲ, ಜಲದ ಕುರಿತು ಅಭಿಮಾನ ವ್ಯಕ್ತಪಡಿಸಬೇಕು. ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕೆ ಇನ್ನೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಎಲ್ಲಾ ಸಿಬ್ಬಂದಿಗಳು ಕನ್ನಡದಲ್ಲೇ ವ್ಯವಹರಿಸಬೇಕು ಎಂದರು.
ವಾ.ಕ.ರ.ಸಾ ಸಂಸ್ಥೆ ಹಾಗೂ ಕನ್ನಡ ಕ್ರಿಯಾ ಸಮಿತಿ ಸೇರಿ ಹಂಪಿ ವಿರೂಪಾಕ್ಷ ದೇವಾಲಯದ ರೂಪಕವನ್ನು ಮಾಡಿಸಿದ್ದರು. ಕಲಾವಿದರಾದ ಗಂಗಾಧರ ನಾರಣ್ಣವರ, ಜೆ.ಚಂದ್ರು, ಗೋಪಾಲ ತಾಂಬ್ರೆ ಮತ್ತು ಪಿ.ಎಂ ಉಪಾಧ್ಯಾಯರವರು ರೂಪಕ ಮಾಡಿದ್ದರು. ನಿರ್ವಾಹಕ ಶಶಿಕುಮಾರ ಬೋಸ್ಲೆ ಮತ್ತು ಚಾಲಕ ಸಂತೋಷ ಸೇರಿ ಬಸ್ಸನ್ನು ಸುಂದರವಾಗಿ ಶೃಂಗರಿಸಿ ಅದರ ಮೇಲೆ ಗಣ್ಯರ ಭಾವಚಿತ್ರ ಅಂಟಿಸಲಾಗಿತ್ತು.
ಸಾರ್ವಜನಿಕ ಸಂಪರ್ಕಾಧಿಕಾರಿ ಪಿ. ಆರ್ ಕಿರಣಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಾ.ಕ.ರ.ಸಾ ಸಂಸ್ಥೆಯ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡ್ರ, ಇಲಾಖೆಯ ಮುಖ್ಯಸ್ಥೆ ವಿಜಯಶ್ರೀ ನರಗುಂದ, ಡಿ. ಕೊಟ್ರಪ್ಪ, ಬಸಲಿಂಗಪ್ಪ ಬೀಡಿ, ಉಪ ಮುಖ್ಯ ಲೆಕ್ಕಾಧಿಕಾರಿ ಪ್ರಕಾಶ್ ಕರಗುಂದರಿ, ಉಗ್ರಾಣ ಮತ್ತು ಖರೀದಿ ನಿಯಂತ್ರಕ ಆಯ್.ಎ. ಕಂದಗಲ್, ಉಪಾಧ್ಯಕ್ಷ ಬಸವರಾಜ್ ಎಸ್. ಕೆಲಸಗಾರ, ನಿರ್ದೇಶಕ ಸಿದ್ದಲಿಂಗೇಶ್ವರ ಮಠದ್, ಅಶೋಕ ಮಳಗಿ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಗಂಗಾಧರ ಕಮಲದಿನ್ನಿ ಸಂತೋಷ ಪಾಟೀಲ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.