Home / Top News / ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ಕ್ರಮ :  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ಕ್ರಮ :  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Spread the love

ಹುಬ್ಬಳ್ಳಿ :ಪುರಾತನ ಭಾಷೆಯಾಗಿರುವ ಕನ್ನಡ ವಿಶ್ವದ ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ. ಭವ್ಯವಾದ ಇತಿಹಾಸ ಕನ್ನಡ ಭಾಷೆಗೆ ಇದ್ದು, ಉಜ್ವಲ ಭವಿಷ್ಯ ನೀಡುವ ಜವಾಬ್ದಾರಿ ನಮ್ಮದಾಗಿದೆ. ಕನ್ನಡ ಉಳಿದರೆ ನಾವು ಉಳಿಯುತ್ತೇವೆ ಎಂಬ ಭಾವನೆಯಿಂದ ಪ್ರತಿಯೊಬ್ಬರೂ ಕನ್ನಡ ಬಳಕೆಯನ್ನು ಮಾಡಬೇಕು. ಕನ್ನಡದಲ್ಲಿ ಇಂಜಿನಿಯರಿಂಗ್ ಶಿಕ್ಷಣ ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಹುಬ್ಬಳ್ಳಿ ಆದರ್ಶ ನಗರದ ಡಾ. ಡಿ.ಎಸ್.ಕರ್ಕಿ ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ,ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಮಾತಾಡ್ ಮಾತಾಡ್ ಕನ್ನಡ, ಲಕ್ಷ ಕಂಠಗಳಿಂದ ಕನ್ನಡದ ಶ್ರೇಷ್ಠತೆ ಸಾರುವ ಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಭಾಷೆ ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿ ಇರುತ್ತದೆ. ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಹೆಚ್ಚಿನ ಮಹತ್ವ ಕೊಟ್ಟು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಹಂತದಲ್ಲಷ್ಟೇ ಅಲ್ಲದೆ ಪದವಿ ಕಲಿಕೆಯಲ್ಲಿ ಕನ್ನಡ ಭಾಷೆಯ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಅದರ ಬಗ್ಗೆ ಕಾನೂನಾತ್ಮಕ ಹೋರಾಟ ಜಾರಿಯಲ್ಲಿದೆ.ಇಂಜಿನಿಯರಿಂಗ್ ಪದವಿಯನ್ನೂ ಸಹ ಕನ್ನಡದಲ್ಲಿಯೇ ಕಲಿಯುವಂತೆ ಆಗಲಿದೆ. ಈಗಾಗಲೇ 15 ಇಂಜಿನಿಯರಿಂಗ್ ಕಾಲೇಜುಗಳು ಕನ್ನಡದಲ್ಲಿ ಕಲಿಸಲು ಮುಂದೆ ಬಂದಿವೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತದೆ.ನಾವು ಕನ್ನಡಿಗರು ಎಂಬುದು ನಮ್ಮ ಹೆಮ್ಮೆಯ ಗುರುತಾಗಿರಬೇಕು. ಯಾವ ಭಾಷೆ ತನ್ನ ಬೇರುಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆಯೋ ಅದನ್ನು ಕಡೆಗಣಿಸಲು ಯಾರಿಂದಲೂ ಸಾಧ್ಯವಿಲ್ಲ. ಭಾಷೆ ಬೆಳೆಯಬೇಕಾದರೆ ಅದರ ಬಳಕೆ ಮುಖ್ಯ .ದೇಶದ ಹಲವು ಭಾಷೆಗಳಲ್ಲಿ ನಮ್ಮ ಕನ್ನಡ ಭಾಷೆ ಉತ್ತುಂಗಕ್ಕೆ ಏರುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡವನ್ನು ಇತರರು ಕಡೆಗಣಿಸಿದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಈ ಕರ್ತವ್ಯವನ್ನು ನಾವು ಸಮರ್ಥವಾಗಿ ನಿಭಾಯಿಸಿದರೆ ಮುಂದಿನ ಪೀಳಿಗೆಗೆ ನಮ್ಮ ಶ್ರೀಮಂತ ಭಾಷೆಯನ್ನು ಉಳಿಸಿಕೊಡಲು ಸಾಧ್ಯವಾಗುತ್ತದೆ. ಹಿಂದಿನ ಹಿರಿಯರು ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ನಮಗೆ ಸಿರಿವಂತ ಭಾಷೆ ಕೊಟ್ಟು ಹೋಗಿದ್ದಾರೆ. ಮಾತಾಡ್ ಮಾತಾಡ್ ಕನ್ನಡ ಎಂಬ ಒಂದು ವಾರದ ಅಭಿಯಾನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು. ಹೊರ ರಾಜ್ಯದಿಂದ ಬರುವ ಜನರಿಗೆ ಅತ್ಯಂತ ಪ್ರೀತಿಪೂರ್ವಕವಾಗಿ ನಮ್ಮ ಭಾಷೆಯನ್ನು ಕಲಿಸಿಕೊಡುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕುವೆಂಪು ಬಾರಿಸು ಕನ್ನಡ ಡಿಂಡಿಮವಾ,ಡಾ.ಕೆ.ಎಸ್.ನಿಸಾರ್ ಅಹ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಗೀತಗಳನ್ನು ಸಾಮೂಹಿಕವಾಗಿ ಹಾಡಲಾಯಿತು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕನ್ನಡ ನಾಡು, ನುಡಿ,ಸಂಸ್ಕೃತಿ,ಪರಂಪರೆಯ ಉಳಿವು ಬೆಳವಣಿಗೆಯ ಸಂಕಲ್ಪ ಬೋಧಿಸಿದರು.

ಸುರಪುರ ಶಾಸಕ ರಾಜುಗೌಡ(ನರಸಿಂಹ ನಾಯಕ), ಮಾಜಿ ಸಂಸದ ಪ್ರೊ. ಐ.ಜಿ ಸನದಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ್, ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ, ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್. ಸಿ. ಬೇವೂರ, ಹಿರಿಯ ಸಹಾಯಕ ಆಯುಕ್ತರು ಸೇರಿದಂತೆ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಕನ್ನಡ ಅಭಿಮಾನಿಗಳು ಹಾಗೂ ಶಾಲಾ,ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]