ಹುಬ್ಬಳ್ಳಿ :ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಯೋಜನೆಯಡಿ ದೇಶದಲ್ಲಿ ಸುಮಾರು 64 ಸಾವಿರ ಕೋಟಿ ರೂ.ವಿನಿಯೋಗಿಸಲಾಗುತ್ತಿದೆ. ರಾಜ್ಯದಲ್ಲಿ 2,600
ಕೋಟಿ ರೂ.ಗಿಂತಲೂ ಹೆಚ್ಚು ವೆಚ್ಚದಲ್ಲಿ ಆರೋಗ್ಯ ಕೇಂದ್ರಗಳು ಸ್ಥಾಪನೆಯಾಗಲಿವೆ. ಪ್ರತಿ ಜಿಲ್ಲೆಯಲ್ಲಿಯೂ ಗುಡಿಸಲು ಮತ್ತು ಬಡಜನರು ಇರುವ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಉಪಯೋಗವಾಗುವಂತಹ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ,ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಹೇಳಿದರು.
ನಗರದ ಕಿಮ್ಸ್ ಆಸ್ಪತ್ರೆಯ ಸಭಾಂಗಣದಲ್ಲಿಂದು ಪ್ರಧಾನ ಮಂತ್ರಿಯವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾಗವಹಿಸಿದ ಆತ್ಮ ನಿರ್ಭರ ಸ್ವ್ಯಾಸ್ತ್ಯ ಭಾರತ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ ಆತ್ಮ ನಿರ್ಭರ ಭಾರತ ಯೋಜನೆಯ ಎಲ್ಲ ಕಾರ್ಯಗಳು ಅನುಷ್ಠಾನಗೊಳ್ಳಲಿವೆ. ಒಟ್ಟು ವೆಚ್ಚ 2600 ಕೋಟಿಗಿಂತಲೂ ಹೆಚ್ಚು ಆಗಲಿದ್ದು, ಕೇಂದ್ರ ಸರ್ಕಾರ ಶೇ.60 ರಷ್ಟು ಧನ ಸಹಾಯ ಮಾಡಲಿದೆ. 15 ನೇ ಹಣಕಾಸಿನ ಆಯೋಗದಿಂದ ಹಣ ಮಂಜೂರಾಗುವುದು. ಉಳಿದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.
17 ವೈದ್ಯಕೀಯ ಕಾಲೇಜುಗಳಲ್ಲಿ ಆರೋಗ್ಯ ಕೇಂದ್ರ ಘಟಕಗಳನ್ನು ಸ್ಥಾಪಿಸಲಾಗುವುದು. 1,2 ಮತ್ತು 3 ನೇ ಹಂತದ ಆರೋಗ್ಯ ಸೇವೆಗಳನ್ನು ಸಮಗ್ರ ಮತ್ತು ಉತ್ಕೃಷ್ಟವಾಗಿ ದೇಶ ಹಾಗೂ ರಾಜ್ಯದ ಎಲ್ಲ ಜನರಿಗೆ ನೀಡುವುದು ಪ್ರಧಾನಿ ಮಂತ್ರಿಯವರ ಕನಸಾಗಿದೆ. ಇದಕ್ಕಾಗಿ ಒಂದು ಸ್ಪಷ್ಟ ನೀಲಿ ನಕ್ಷೆ ತಯಾರಿಸಿ ಯೋಜನೆ ರೂಪಿಸಿ ಇಂದು ಉದ್ಘಾಟನೆ ನೆರವೇರಿಸಿದ್ದಾರೆ.
ಪ್ರಧಾನ ಮಂತ್ರಿಯವರ ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಸಂಪೂರ್ಣ ಬೆಂಬಲವಿದ್ದು, ಪೂರಕವಾಗಿ ಕಾರ್ಯ ನಿರ್ಹಹಿಸಲಾಗುವುದು. ನಗರ ಪ್ರದೇಶಗಳಲ್ಲಿ ನಗರ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಸಲಾಗುವುದು ಎಂದು ಅವರು ತಿಳಿಸಿದರು.
ಮೊದಲ ಹಂತದ ಲಸಿಕೆ ಪಡೆದ ಪ್ರತಿಯೊಬ್ಬರು ಕಡ್ಡಾಯವಾಗಿ ಎರಡನೇ ಹಂತದ ಲಸಿಕೆ ಪಡೆಯಬೇಕು. ಕೋವಿಡ್ ಸಾಂಕ್ರಾಮಿಕ ರೋಗ ಸಂಪೂರ್ಣವಾಗಿ ಕಡಿಮೆಯಾಗಿಲ್ಲ, ರಾಜ್ಯ ದೇಶ ಅಷ್ಟೇ ಅಲ್ಲದೆ ವಿಶ್ವದಿಂದಲೇ ಈ ರೋಗ ಕಣ್ಮರೆಯಾದಾಗ ಮಾತ್ರ ನಾವು ಸಂಪೂರ್ಣವಾಗಿ ನಿಶ್ಚಿಂತೆಯಿಂದಿರಲು ಸಾಧ್ಯ.
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಈಗಾಗಲೇ ಶಾಲೆ ಆರಂಭವಾಗಿ 3 -4 ತಿಂಗಳಾದರೂ ಯಾವುದೇ ಗಂಭೀರ ಸಮಸ್ಯೆ ಕಂಡು ಬಂದಿಲ್ಲ. ಮಕ್ಕಳ ಶೈಕ್ಷಣಿಕ ಪ್ರಗತಿ ದೃಷ್ಟಿಕೋನದಿಂದ ಶಾಲೆ ಆರಂಭ ಮಾಡಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಶಾಲೆ ಮುಚ್ಚಲಾಗಿತ್ತು, ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿತ್ತು. ಎಲ್ಲ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಶಾಲೆ ಆರಂಭಿಸಲಾಗಿದ್ದು, ಶೇ.1 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ರೋಗ ಮಕ್ಕಳಲ್ಲಿ ಕಂಡು ಬಂದಲ್ಲಿ ಅಂತಹ ಶಾಲೆಯನ್ನು ಮುಚ್ಚಲಾಗುವುದು.
ಮಳೆಗಾಲದಲ್ಲಿ ನಗರ ಪ್ರದೇಶಗಳಲ್ಲಿ ಡೆಂಗ್ಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಆರೋಗ್ಯ ಇಲಾಖೆಯಿಂದ ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ. ಜನರೂ ಸಹ ತಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡು ತಗ್ಗು ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಲು ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಠಾಣಿ, ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ಡಾ. ರಾಜಶ್ರೀ ಜೈನಾಪೂರ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.