ಸಾರಿಗೆ ಸಂಸ್ಥೆಗಳಲ್ಲಿ ಪರ್ಯಾಯ ಆದಾಯ ಮೂಲವಾಗಿ ಆರಂಭಿಸಲಾಗಿರುವ ಕಾರ್ಗೋ ಸೇವೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ವಾಣಿಜ್ಯ ಮಳಿಗೆಗಳು ಮತ್ತಿತರ ಮೂಲಗಳಿಂದ ಸಾರಿಗೇತರ ಆದಾಯ ಹೆಚ್ಚಳಕ್ಕೆ ಸರ್ವ ರೀತಿಯಲ್ಲೂ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.
ಹುಬ್ಬಳ್ಳಿ ಗೋಕುಲ ರಸ್ತೆಯ ಬಸ್ ನಿಲ್ದಾಣದಲ್ಲಿ ಕಾರ್ಗೋ ಕೇಂದ್ರದ ಪರಿವೀಕ್ಷಣೆ ನಡೆಸಿದ ನಂತರ ಅವರು ಮಾತನಾಡುತ್ತಿದ್ದರು.
ಕೋವಿಡ್ ನಿಂದಾಗಿ ಸಾರಿಗೆ ಸಂಸ್ಥೆಗಳು ಇತರೆ ಎಲ್ಲಾ ಕ್ಷೇತ್ರಗಳಿಗಿಂತಲೂ ಹೆಚ್ಚಿನ ಸಂಕಷ್ಟ ಅನುಭವಿಸುತ್ತಿವೆ. ಕೋವಿಡ್ ಪೂರ್ವದಲ್ಲಿ ಇದ್ದಂತೆ ಪೂರ್ಣ ಪ್ರಮಾಣದಲ್ಲಿ ಬಸ್ಸುಗಳ ಸಂಚಾರ ಮಾಡಲಾಗುತ್ತಿದೆ. ಆದರೆ ಪ್ರಯಾಣಿಕರ ಸಂಖ್ಯೆಯಲ್ಲಿ ನಿರೀಕ್ಷಿತ ಚೇತರಿಕೆ ಕಂಡು ಬರುತ್ತಿಲ್ಲ.ಹೀಗಾಗಿ ಆದಾಯ ಸಂಗ್ರಹದಲ್ಲಿ ತೀವೃ ಕೊರತೆ ಉಂಟಾಗಿದೆ. ಜೊತೆಗೆ ನಿರಂತರ ಇಂಧನ ಬೆಲೆ ಏರಿಕೆ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.ಸಧ್ಯ ಬರುತ್ತಿರುವ ಸಾರಿಗೆ ಆದಾಯ ಇಂಧನ ವೆಚ್ಚ ಹಾಗೂ ಬಸ್ಸುಗಳ ನಿರ್ವಹಣೆಗೆ ಖರ್ಚಾಗುತ್ತಿದೆ.ಈ ಹಿನ್ನೆಲೆಯಲ್ಲಿ ಕಾರ್ಗೋ ಸೇವೆಯ ವಿಸ್ತರಣೆ, ಒಪ್ಪಂದದ ಬಸ್ ಗಳ ಹೆಚ್ಚಳ,ಖಾಲಿ ಸ್ಥಳಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿಯಲ್ಲಿ ವಾಣಿಜ್ಯ ಆದಾಯ ಗಳಿಕೆ ಮತ್ತಿತರ ಆದಾಯಗಳ ಹೆಚ್ಚಳಕ್ಕೆ ಸರ್ವಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಸಂಸ್ಥೆಯ ಆದಾಯ ನಿರ್ವಹಣೆಯಲ್ಲಿ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡಲು ಆದ್ಯತೆ ನೀಡಲಾಗುತ್ತಿದೆ. ಪ್ರಯಾಣಿಕರಿಂದ ಟಿಕೆಟ್ ಹಣ ಸಂಗ್ರಹಣೆ, ಸಾಂಧರ್ಬಿಕ ಒಪ್ಪಂದದ ಬಸ್ಸುಗಳ ಆದಾಯ ಸಂಗ್ರಹ, ವಾಣಿಜ್ಯ ಮಳಿಗೆಗಳ ಬಾಡಿಗೆ ಸಂಗ್ರಹ ಮತ್ತಿತರ ಹಣಕಾಸಿನ ವಹಿವಾಟುಗಳಲ್ಲಿ ಎಟಿಎಂ ಕಾರ್ಡ್ ಬಳಕೆ, ಪೇಟಿಎಂ,ಗೂಗಲ್ ಪೇ, ಫೋನ್ ಪೇ ಮತ್ತಿತರ ತಂತ್ರಜ್ಞಾನ ಗಳ ಅಳವಡಿಕೆ ಮಾಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ನಿಂದ ಮೃತರಾದ ಸಿಬ್ಬಂದಿಗಳ ಅವಲಂಬಿತರಿಗೆ ಆಪ್ತ ಸಮಾಲೋಚನೆ ಸಭೆ ನಡೆಸಿ ಅಗತ್ಯ ನೆರವು,ಸಾಂತ್ವನ ನೀಡಿ ಧೈರ್ಯ ತುಂಬಬೇಕು ಎಂದು ಹೇಳಿದರು.
ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ ಮಾತನಾಡಿ ಇತ್ತಿಚೆಗೆ ಸಾರಿಗೆ ಆದಯದಲ್ಲಿ ಚೇತರಿಕೆ ಕಾಣುತ್ತಿದೆ. ಪ್ರಸ್ತುತ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಅನ್ಯ ರಾಜ್ಯದ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಿರುವ ನಿರ್ಬಂಧ ತೆರವುಗೊಳಿಸಿದರೆ ಆದಾಯ ಸಂಗ್ರಹದಲ್ಲಿ ಮತ್ತಷ್ಟು ಸುಧಾರಣೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ ಹುದ್ದಾರ,ಮುಖ್ಯ ಕಾಮಗಾರಿ ಇಂಜಿನಿಯರ್ ನಾಗರಾಜ ಮೂರ್ತಿ, ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಮತ್ತಿತರರು ಇದ್ದರು.