ಹುಬ್ಬಳ್ಳಿ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲಿನ ವೈಯಕ್ತಿಕ ದ್ವೇಷ ಸಾಧನೆಗೆ ಅಲ್ಪಸಂಖ್ಯಾತರನ್ನು ಏಕೆ ಬಳಸಿಕೊಳ್ಳುತ್ತಿದ್ದೀರಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಅವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವಿರುದ್ಧ ವೈಯಕ್ತಿಕ ದ್ವೇಷವನ್ನು ಬೇರೆ ರೀತಿಯಲ್ಲಿ ಟೀಕೆ ಮಾಡಿ, ಆದರೆ ಅಲ್ಪಸಂಖ್ಯಾತರನ್ನು ಮುಂದುಟ್ಟುಕೊಂಡು ಸಮಾಜವನ್ನು ವಿಭಜಿಸುವ ಕೆಲಸ ಮಾಡಬೇಡಿ ಎಂದು ತಾಕೀತು ಮಾಡಿದರು.
ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಜನರಿಗೆ ಅನುಕೂಲವಾಗುವಂತಹ ಯಾವ ಯೋಜನೆ ತಂದಿದ್ದಾರೆ? ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಎಲ್ಲ ರೀತಿಯ ಆಡಳಿತ ವೈಫಲ್ಯ ವಿರುದ್ಧ ಒಂದು ದಿನವು ಟೀಕೆ ಮಾಡದ ಕುಮಾರಸ್ವಾಮಿ ಅವರು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧವೇ ಮಾತನಾಡುತ್ತಿರುವುದು ಏಕೆ ಎಂದು ಪ್ರಶ್ನೆ ಮಾಡಿದರು. ಆಡಳಿತ ಪಕ್ಷ ಬಿಟ್ಟು ಪ್ರತಿಪಕ್ಷವು ಮತ್ತೊಂದು ಪ್ರತಿಪಕ್ಷವನ್ನೇ ಟೀಕೆ ಮಾಡುತ್ತಿರುವುದು ನೋಡಿದರೆ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗೆ ಒಪ್ಪಂದ ಮಾಡಿಕೊಂಡಿದೀರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು.
ಶಾಸಕ ರಿಜವಾನ್ ಅರ್ಶಾದ್ ಮಾತನಾಡಿ, ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ತಮ್ಮ ಕ್ಯಾಬಿನೆಟ್ ನಲ್ಲಿ ಒಬ್ಬನೇ ಒಬ್ಬ ಅಲ್ಪಸಂಖ್ಯಾತರಿಗೆ ಸ್ಥಾನ ಕೊಡದ ಕುಮಾರಸ್ವಾಮಿ ಅವರು ಪ್ರತಿಬಾರಿ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರ ಬಗ್ಗೆ ಅನುಕಂಪ ತೋರಿಸುತ್ತಿದ್ದಾರೆ. ಅವರದ್ದು ಅವಕಾಶವಾದಿ ರಾಜಕಾರಣ ಎಂದು ದೂರಿದರು.
ಲಖೀಂಪುರದಲ್ಲಿ ರೈತರ ಮೇಲಿನ ಹತ್ಯೆ, ಇಂಧನ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ಹಾಗೂ ಕುಸಿದ ಆರ್ಥಿಕ ವ್ಯವಸ್ಥೆ ಕುರಿತು ಒಂದು ದಿನವು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಒಂದು ದಿನವು ಧ್ವನಿ ಎತ್ತಲಿಲ್ಲ. ಅಲ್ಪಸಂಖ್ಯಾತರ ಹೆಸರು ಬಳಸಿಕೊಂಡು ಸಮಾಜದಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಸಲಹೆ ಮಾಡಿದರು.
ವಿಪ ಸದಸ್ಯ ನಶೀರ್ ಅಹ್ಮದ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ಸಮೂದಾಯದವರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ಅನುದಾನ ಕೂಡಾ ಬಿಡುಗಡೆ ಮಾಡಲಾಗಿತ್ತು. ಇದೀಗ ಬಿಜೆಪಿ ಸರ್ಕಾರ ಅವುಗಳ ಅನುದಾನವನ್ನು ಕಡಿತವಾಗುವ ಕೆಲಸ ಮಾಡಿದೆ. ಧೀನ ದಲಿತರು, ಶೋಷಿತರ ಮೇಲೆ ನಿತ್ಯವು ದಬ್ಬಾಳಿಕೆ ನಡೆಯುತ್ತಿದೆ. ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದ ಅವರು, ಸಿದ್ದರಾಮಯ್ಯ ಅವರನ್ನೇ ಏಕೆ ಟೀಕೆ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
Hubli News Latest Kannada News