ಹುಬ್ಬಳ್ಳಿ : ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಿಸಿರುವುದನ್ನು ವಿರೋಧಿಸಿ ಮತ್ತು ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (KARD) ಕಿಮ್ಸ್ ಕಾಲೇಜಿನ ಆವರಣದ ಮುಂಭಾಗದಲ್ಲಿ ಧರಣಿ ನಡೆಸಿತು.
2002 ರಿಂದ 2018ರ ಅವಧಿಯಲ್ಲಿ 5 ಬಾರಿ ಶುಲ್ಕ ಹೆಚ್ಚಳವಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಶುಲ್ಕವನ್ನು ಕರ್ನಾಟಕ ಪಡೆಯುತ್ತಿದೆ. ವೈದ್ಯರಾಗಬೇಕು ಎನ್ನುವ ಕನಸಿನಿಂದ ಬಡ ವಿದ್ಯಾರ್ಥಿಗಳನ್ನು ದೂರವಿಡಲಾಗುತ್ತಿದೆ. ಈ ಕ್ರಮ ವಿದ್ಯಾರ್ಥಿ ವಿರೋಧಿಯಾಗಿದೆ. ರಾಜ್ಯದಲ್ಲಿ 4 ಸಾವಿರ ವೈದ್ಯಕೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿದ್ದು, ವರ್ಷಕ್ಕೆ 1.29 ಲಕ್ಷ ರೂ. ಶುಲ್ಕವನ್ನು ಭರಿಸುತ್ತಿದ್ದಾರೆ. ಪ್ರತಿ ತಿಂಗಳು 10 ಸಾವಿರ ಕೊವಿಡ್ ಕರ್ತವ್ಯದ ಭತ್ಯೆ ಕೊಡುವುದಾಗಿ ಆರೋಗ್ಯ ಇಲಾಖೆ ಘೋಷಿಸಿತ್ತು. ಆದರೆ ಕೊವಿಡ್ ಕರ್ತವ್ಯದ ಭತ್ಯೆ ಈವರೆಗೆ ಒಂದೇ ಒಂದು ರೂಪಾಯಿ ಬಿಡುಗಡೆ ಆಗಿಲ್ಲ. ಇನ್ನು ಎಮ್ ಬಿಬಿಎಸ್ ಪದವಿ ಮುಗಿಸಿ ಗ್ರಾಮೀಣ ಸೇವೆಯಲ್ಲಿ ತೊಡಗಿಕೊಂಡಿರುವ ವೈದ್ಯರುಗಳಿಗೆ ಮೂರು ತಿಂಗಳು ಕಳೆದರು ಕೂಡಾ ಸರ್ಕಾರ ಒಂದು ಪೈಸೆ ಬಿಡಿಗಾಸು ನೀಡಿಲ್ಲ ಎಂದು ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ.