ಹುಬ್ಬಳ್ಳಿ : ಆರಎಸ್‍ಎಸ್ ಒಂದು ಕೋಮುವಾದಿ ಸಂಘಟನೆ. ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಲು ಇರುವವರು ಆರ್‍ಎಸ್‍ಎಸ್‍ನವರು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್ ನವರು ಧರ್ಮಗಳ ನಡುವೆ ವಿರೋಧ ಎತ್ತಿಕಟ್ಟಿ ಹಿಂದುತ್ವದ ಹೆಸರಿನಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇಂತದರಲ್ಲಿ ನಂಬಿಕೆ ಇಟ್ಟಿಲ್ಲ. ನಾವು ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ. ಆರ್‍ಎಸ್‍ಎಸ್‍ನ ಮುಖವಾಡ ಬಿಜೆಪಿಯಾಗಿದೆ. ಆರ್‍ಎಸ್‍ಎಸ್ ನವರು ಏನು ಮಾರ್ಗದರ್ಶನ ಕೊಡುತ್ತಾರೊ ಅದೇ ರೀತಿ ನಡೆದುಕೊಳ್ಳುವುದೇ ಬಿಜೆಪಿ ಕೆಲಸ ಎಂದು ಆರೋಪಿಸಿದರು.
ಉಪ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಉಪಚುನಾವಣೆಯಲ್ಲಿ ಎರೆಡೂ ಕ್ಷೇತ್ರಗಳಲ್ಲೂ ನಾವು ಗೆಲುವು ಸಾಧಿಸುತ್ತೇವೆ. ಹಾನಗಲ್ ಹಾಗೂ ಸಿಂಧಗಿ ಎರೆಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ದೇಶದಲ್ಲಿ ಬೆಲೆಗಳು ಹೆಚ್ಚಾಗಿದೆ. ಇದಕ್ಕೆ ಬಿಜೆಪಿ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೆ ಕಾರಣ. ಜನ ಬಿಜೆಪಿ ಸರ್ಕಾರದಿಂದ ರೋಸಿ ಹೋಗಿದ್ದಾರೆ ಎಂದರು.
ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್‍ಗೆ ಯಾವಾಗಲೂ ಕಾಂಗ್ರೆಸ್ ಟಾರ್ಗೇಟ್. ಬಸವಕಲ್ಯಾಣದಲ್ಲಿಯೂ ಇದೇ ರೀತಿ ಮಾಡಿದ್ದಾರೆ. ಹಾನಗಲ್ ಹಾಗೂ ಸಿಂಧಗಿಯಲ್ಲಿ ಇದೇ ರೀತಿ ಮಾಡಿದ್ದಾರೆ. ಎಲ್ಲಿ ಕಣಕ್ಕಿಳಿಸಬೇಕೋ ಅಲ್ಲಿ ನಿಲ್ಲಿಸಿಲ್ಲ. ಮಂಡ್ಯ, ಹಾಸನ ಮತ್ತಿತರ ಕಡೆಗಳಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿಗಳನ್ನು ನಿಲ್ಲಿಸಲಿ ಎಂದ ಅವರು, ಬಿಜೆಪಿಗೆ ಸಹಾಯವಾಗಲಿ ಎಂದು ಅಲ್ಪಸಂಖ್ಯಾತರನ್ನು ಕಣ್ಣಕ್ಕಿಳಿಸಿದ್ದಾರೆ ಎಂದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ತಮ್ಮನ್ನು ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ರಾಷ್ಟ್ರ ರಾಜಕಾರಣಕ್ಕೆ ಅವರು ಕರೆದೂ ಇಲ್ಲ. ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಅದೆಲ್ಲ ಸುಳ್ಳು ಎಂದು ಪ್ರತಿಕ್ರಿಯಿಸಿ ರಾಜ್ಯದ ಚುನಾವಣೆಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.