ಹುಬ್ಬಳ್ಳಿ : ಕೊಪ್ಪಳ ಜಿಲ್ಲೆ ಹನುಮಸಾಗರದ ಮಿಪಾಪುರ ಗ್ರಾಮದಲ್ಲಿನ ದೇವಾಲಯದಲ್ಲಿ ದಲಿತ ಸಮೂದಾಯದ ಮೂರು ವರ್ಷದ ಮಗು ದೇವಾಲಯ ಪ್ರವೇಶಿಸಿದ ಹಿನ್ನೆಲೆ ಹೆತ್ತವರಿಗೆ ದಂಡ ವಿಧಿಸಿರುವುದು ಸೇರಿದಂತೆ ರಾಜ್ಯಾದ್ಯಂತ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಯ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಹಾಗೂ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ನಗರದಲ್ಲಿಂದು ಪ್ರತಿಭಟನೆ ನಡೆಸಿತು.
ಇಲ್ಲಿನ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮಹಾಮಂಡಳದ ಸದಸ್ಯರು, ಕೊಪ್ಪಳದ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ದಲಿತ ಮುಖಂಡ ಗುರುನಾಥ ಉಳ್ಳಿಕಾಶಿ ಮಾತನಾಡಿ, ಸರ್ಕಾರವೇ ಮತಾಂತರ ನಿಷೇಧ ಕಾಯಿದೆ ಬಗ್ಗೆ ಮಾತನಾಡುತ್ತದೆ. ಆದರೆ ರಾಜ್ಯದಲ್ಲಿ ದಲಿತರ ಮೇಲೆ ನಿರಂತರವಾಗಿ ಶೋಷಣೆಗಳು ನಡೆಯುತ್ತಲೆ ಇದೆ. ಅದರಂತೆ ಸೆ.04 ರಂದು ಕೊಪ್ಪಳದ ಹನುಮಸಾಗರದ ಮಿಯಾಗ್ರಾಮದಲ್ಲಿ ಮಗುವೊಂದು ಮಾರುತೇಶ್ವರ ದೇಗುಲ ಪ್ರವೇಶ ಮಾಡಿದ ಕಾರಣಕ್ಕೆ ದೇಗುವ ಅಪವಿತ್ರಗೊಂಡಿದೆ ಎಂದು ಗ್ರಾಮಸ್ಥರು 25 ಸವಿರ ದಂಡವನ್ನು ಹೆತ್ತರಿಗೆ ಹಾಕಿದೆ. ಅಲ್ಲದೇ ಮುಂದುವರೆದು ದೇಗುಲದ ಪವಿತ್ರ್ಯತೆಗೆ ಹೋಮ ಹವನ ನಡೆಸಿ ಅದಕ್ಕೂ ಹಣ ಕೇಳಿದ್ದಾರೆ. ಕೂಡಲೇ ಸರ್ಕಾರ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಸಾರ್ವಜನಿಕ ಸ್ಥಳಗಳಲ್ಲಿ ದಲಿತರಿಗೆ ಮುಕ್ತ ಗೌರವದ ಪ್ರವೇಶವಿರುವಂತೆ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ನಂತರ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಫಕ್ಕಣ್ಣ ದೊಡ್ಡಮನಿ, ಪ.ಶಿ.ದೊಡ್ಡಮನಿ, ದೇವಣ್ಣ ಇಟಗಿ, ಇಮ್ತಿಯಾಜ್ ಬಿಜಾಪುರ, ಸುನಿಲ ನಿಟ್ಟೂರ, ರೇವಣಸಿದ್ದಪ್ಪ ದೇಸಾಯಿ, ಗುರುಮೂರ್ತಿ ಬೆಂಗಳೂರು, ಈರಣ್ಣ ಮನಗೂಳಿ ಸೇರಿದಂತೆ ಮುಂತಾದವರು ಇದ್ದರು.