ಹುಬ್ಬಳ್ಳಿ: ಖಾಸಗಿ, ಪುನರಾವರ್ತಿತ ಅಭ್ಯರ್ಥಿ ಹಾಗೂ ಫಲಿತಾಂಶ ತೃಪ್ತಿಕರವಾಗಿಲ್ಲದವರಿಗಾಗಿ ನಡೆಸಿದ್ದ ದ್ವೀತಿಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ನಗರದ ಬೆನಕ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ದ್ವೀತಿಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ಪೃಥ್ವಿರಾಜ ಗಸ್ತಿ 600 ಕ್ಕೆ 573 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಬಂದು ಸಾಧನೆಗೈದಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಸರ್ಕಾರ ವಾರ್ಷಿಕ ಪರೀಕ್ಷೆ ರದ್ದು ಮಾಡಿ, ಪರೀಕ್ಷೆಗೆ ನೋಂದಾಯಿಸಿದ್ದ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಈ ರೀತಿ ಪಾಸ್ ಆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ನೀಡಿರುವ ಅಂಕಗಳು ತೃಪ್ತಿದಾಯಕವಾಗಿಲ್ಲವಾದರೆ, ಪರೀಕ್ಷೆ ತೆಗೆದುಕೊಳ್ಳಲು ಸೂಚಿಸಲಾಗಿತ್ತು. ಅದರಂತೆ ಪೃಥ್ವಿರಾಜ ಗಸ್ತಿ ಚಾಲೆಂಜ್ ಮಾಡಿ ಪರೀಕ್ಷೆ ಎದುರಿಸಿದರು. ಇದೀಗ ಫಲಿತಾಂಶ ಹೊರಬಿದಿದ್ದು ಅದರಲ್ಲಿ 600 ಕ್ಕೆ 573 ಅಂಕಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಪೃಥ್ವಿರಾಜ ಗಸ್ತಿ ಮೂಲತಃ ಶಿರಸಿ ಜಿಲ್ಲೆಯ ಮುಂಡಗೋಡದ ನರಸಗೌಡ ಹಾಗೂ ಅರ್ಚನಾ ದಂಪತಿಯ ಪುತ್ರರಾಗಿದ್ದು, ನಿತ್ಯ 4-5 ತಾಸು ಓದುತ್ತಿದ್ದರಂತೆ. ಇನ್ನು ಮೆಡಿಕಲ್ ಮಾಡಿ ಡಾಕ್ಟರ್ ಆಗಬೇಕೆಂಬುದು ಪೃಥ್ವಿರಾಜ ಅವರ ಗುರಿಯಾಗಿದೆಯಂತೆ.
ಮಗ ಪೃಥ್ವಿರಾಜ ರ್ಯಾಂಕ್ ಬಂದಿರುವುದು ಖುಷಿ ತಂದಿದೆ. ಅವನ ಆಸೆಯಂತೆ ನೀಟ್ ತರಭೇತಿ ನೀಡಿ, ಮೆಡಿಕಲ್ ಮಾಡಿಸುವ ಉದ್ದೇಶ ಹೊಂದಿದ್ದೇವೆ ಎಂದು ಅವರ ತಂದೆ ನರಸಗೌಡ ಗಸ್ತಿ ಅವರ ಅಭಿಪ್ರಾಯವಾಗಿದೆ.
ಇನ್ನು ವಿದ್ಯಾರ್ಥಿಯ ಈ ಸಾಧನೆಗೆ ಬೆನಕಾ ಕಾಲೇಜಿನ ಚೇರ್ಮನ್ ವಿನೋದ ಹೆಚ್ ನಾಯಕ ಹಾಗೂ ಪ್ರಿನ್ಸಿಪಲ್ ಶೈಲಜಾ ನಾಯಕ ಹರ್ಷ ವ್ಯಕ್ತಪಡಿಸಿದ್ದು ಇಂದು ವಿದ್ಯಾರ್ಥಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ರಾಘವೇಂದ್ರ, ಮಂಜುನಾಥ ಆಚಾರ್ಯ, ರವೀಂದ್ರ ಸವಣೂರು, ಶಿಲ್ಪಾ ಕಿರೆಸೂರ, ಗೌರವ, ಸೌರವ ಸೇರಿದಂತೆ ಮುಂತಾದ ಕಾಲೇಜಿನ ಸಿಬ್ಬಂದಿ ವರ್ಗದವರು ಇದ್ದರು.