Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಜೋಗ ಫಾಲ್ಸ್ ಗೆ ಪ್ಯಾಕೇಜ ಟೂರ್ ಬಸ್ ಮತ್ತೆ ಆರಂಭ

ಜೋಗ ಫಾಲ್ಸ್ ಗೆ ಪ್ಯಾಕೇಜ ಟೂರ್ ಬಸ್ ಮತ್ತೆ ಆರಂಭ

Spread the love

ಹುಬ್ಬಳ್ಳಿ: ಪ್ರವಾಸಿಗರಿಗೆ ಕಡ್ಡಾಯ ಕೋವಿಡ್ ನೆಗೆಟಿವ್ ವರದಿಯ ನಿರ್ಬಂಧವನ್ನು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತದ ವೀಕ್ಷಣೆಗೆ ವಾರಾಂತ್ಯದ ದಿನಗಳಂದು ವಿಶೇಷ ಪ್ಯಾಕೇಜ್ ಟೂರ್ ಬಸ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲಾಗಿದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ವಿಶ್ವ ವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡಿದೆ. ಪ್ರವಾಸಿಗರ ಅನುಕೂಲ ಕ್ಕಾಗಿ ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದಿಂದ ವಾರಾಂತ್ಯದ ದಿನಗಳಂದು ಶನಿವಾರ ಮತ್ತು ರವಿವಾರ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ ಬಸ್ ಆರಂಭಿಸಲಾಗಿತ್ತು. ಸುರಕ್ಷತೆ ಹಾಗೂ ಮಿತವ್ಯಯ ಪ್ರಯಾಣ ದರದಿಂದಾಗಿ ಅದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.

ಕೋವಿಡ್ ಮೂರನೆ ಅಲೆ ಭೀತಿ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತ
ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿತ್ತು. ಪ್ರಯಾಣಿಕರ ಕೊರತೆಯಿಂದಾಗಿ ಈ ವಿಶೇಷ ಬಸ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಇದೀಗ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿಯಿಂದ ವಿನಾಯಿತಿ ನೀಡಲಾಗಿದೆ. ಆದರೆ ಕನಿಷ್ಟ ಒಂದು ಡೋಸ್ ಲಸಿಕೆ ಪಡೆದಿರವುದನ್ನು ಕಡ್ಡಾಯಗೊಳಿಸಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ವಾರಾಂತ್ಯದ ದಿನಗಳಲ್ಲಿ ಶನಿವಾರ ಹಾಗೂ ರವಿವಾರದಂದು ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ.

ಪ್ರಯಾಣಿಕರ ಅಭಿರುಚಿಗೆ ತಕ್ಕಂತೆ ವೋಲ್ವೊ ಮತ್ತು ವೇಗದೂತ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಈ ಬಸ್ ಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಬೆಳಿಗ್ಗೆ 7-30 ಕ್ಕೆ ವೇಗದೂತ ಬಸ್ ಹಾಗೂ 8ಕ್ಕೆ ವೋಲ್ವೊ ಬಸ್ ಹುಬ್ಬಳ್ಳಿಯಿಂದ ಹೊರಡುತ್ತದೆ.

ಮಾರ್ಗ ಮಧ್ಯದಲ್ಲಿ ಯಾತ್ರಿಗಳಿಗೆ ಶಿರಸಿ ಮಾರಿಕಾಂಬಾ ದೇವಾಲಯ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.ಈ ಬಸ್ ಗಳು ಮಧ್ಯಾಹ್ನ ಜೋಗ ತಲುಪುತ್ತವೆ. ಅಲ್ಲಿ ಸ್ಥಳ ವೀಕ್ಷಣೆ,ಊಟೋಪಚಾರಕ್ಕೆ ನಾಲ್ಕು ತಾಸು ಸಮಯಾವಕಾಶ ವಿರುತ್ತದೆ. ಸಂಜೆ ಜೋಗದಿಂದ ಬಿಟ್ಟು ರಾತ್ರಿ 9-00ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತವೆ.

ಪ್ರಯಾಣ ದರ ಹೋಗಿ ಬರಲು ಎರಡೂ ಸೇರಿ ಒಬ್ಬರಿಗೆ ವೋಲ್ವೊ ಬಸ್ ಗೆ ರೂ.600 ಹಾಗೂ ವೇಗದೂತ ಬಸ್ ಗೆ ರೂ.350 ನಿಗದಿಪಡಿಸಲಾಗಿದೆ.

ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತದೆ. ಸಂಪೂರ್ಣ ಸ್ಯಾನಿಟೈಸ್ ಮಾಡಿದ ಸುಸಜ್ಜಿತ ಬಸ್ ಆಯ್ಕೆ ಮಾಡಲಾಗಿದೆ. ಘಟ್ಟ ಪ್ರದೇಶದಲ್ಲಿ ಚಾಲನಾ ಅನುಭವವಿರುವ ಲಸಿಕೆ ಪಡೆದಿರುವ ಚಾಲಕರನ್ನು ನಿಯೋಜಿಸಲಾಗುತ್ತದೆ. ಬಸ್ಸಿನ ಆಸನ ಸಂಖ್ಯೆಯಷ್ಟು ಜನರಿಗೆ ಮಾತ್ರ ಅವಕಾಶವಿರುತ್ತದೆ. ಪ್ರಯಾಣಿಕರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿರಬೇಕು ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ.

ಈ ವಿಶೇಷ ಬಸ್ ಗಳಿಗೆ www.ksrtc.in ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಮತ್ತು ಹಳೆ ಬಸ್ ನಿಲ್ದಾಣ, ಹೊಸೂರು,ಗೋಕುಲ ರಸ್ತೆ ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಬಸ್ ನಿಲ್ದಾಣ ಅಧಿಕಾರಿಗಳನ್ನ ಮೊ.ಸಂಖ್ಯೆ: 7760991662 / 7760991682 ರಲ್ಲಿ ಅಥವ ಘಟಕ ವ್ಯವಸ್ಥಾಪಕರನ್ನು ಮೊ.ಸಂಖ್ಯೆ:7760991674(ವೋಲ್ವೊ ಬಸ್) 7760991677(ವೇಗದೂತ ಬಸ್) ರಲ್ಲಿ ಸಂಪರ್ಕಿಸಬಹುದು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]