ಹುಬ್ಬಳ್ಳಿ : ದೇಶದಲ್ಲಿ ಆಪ್ ಬಹುಬೇಗ ಬೆಳೆಯುತ್ತಿರುವ ಪಕ್ಷ ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಯಗೊಂಡು ಆಪ್ ಕುರಿತು ಹಾರಿಕೆ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಗೆ ಪಕ್ಷದಿಂದ ಮಹಾನಗರ ಚುನಾವಣೆ ಮೂಲಕ ಉತ್ತರ ನೀಡಲಾಗುವುದು ಎಂದು ರಾಜ್ಯ ಸಹ ಸಂಚಾಲಕ ಹಾಗೂ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿ ಶಾಂತಲಾ ದಾಮ್ಲೆ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಚುನಾವಣೆ ಆಮ್ ಆದ್ಮಿ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡ ಬೆನ್ನಲ್ಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಪ್ ಕೇವಲ ಸಾಮಾಜಿಕ ಜಾಲತಾಣದಲ್ಲಿದೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಆಪ್ ತೀವ್ರವಾಗಿ ಖಂಡಿಸಿದೆ. ಆಮ್ ಆದ್ಮಿ ಪಕ್ಷದ ಬಗ್ಗೆ ಮಾತನಾಡುವ ಬಿಜೆಪಿಯವರು ಈ ಹಿಂದೆ ಜನರಿಗೆ ಹೇಳಿದ ಭರವಸೆ ಈಡೇರಿಸಿದೆಯೇ ಎಂಬುದನ್ನು ಅರಿತುಕೊಳ್ಳಲಿ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಬಂದರೆ ಜನರ ಅಭಿವೃದ್ಧಿ ಸಾಧ್ಯ ಎಂದು ಬಿಂಬಿಸಿ ಜನರಿಗೆ ಮೋಸ ಮಾಡುತ್ತಿರುವ ಬಿಜೆಪಿಗೆ ಆಪ್ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಬಿಜೆಪಿ ಪಕ್ಷಕ್ಕೆ ಜನರ ಮೇಲೆ ನಿಜವಾಗಿಯೂ ಕಾಳಜಿ ಇದ್ದರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೊದಲು ಬಾಂಡ್ ನಲ್ಲಿ ಅವರ ಜತೆಗೆ ನೀಡುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬರೆದುಕೊಡಲಿ ನಂತರ ಚುನಾವಣೆ ಎದುರಿಸಬೇಕು ಎಂದು ಸವಾಲ್ ಹಾಕಿದರು.
ಇನ್ನು ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಆದ್ಮಿ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪಕ್ಷದ ಮುಖಂಡರು ಇಂದು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡ ಹೆಚ್.ಡಿ.ಬಸವರಾಜು, ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ನಿವೃತ್ತ ಕೆಎಎಸ್ ಅಧಿಕಾರಿ ರವಿ ಶಂಕರ ಸೇರಿದಂತೆ ಪಕ್ಷದ ಅಭ್ಯರ್ಥಿಗಳು ಇದ್ದರು.

Hubli News Latest Kannada News