ಹುಬ್ಬಳ್ಳಿ : ನಾಗರ ಪಂಚಮಿ ಅಂಗವಾಗಿ ಕಲ್ಲುನಾಗರಕ್ಕೆ ಹಾಲು ಎರೆಯುವುದು ಸಂಪ್ರದಾಯ. ಆದರೆ, ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಅಲೆಮಾರಿ ಮಕ್ಕಳಿಗೆ ಹಾಲು ನೀಡಿ ನಾಗಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ನವನಗರದ ಮುಗಳಕೊಡ ಮಠದ ಸಮೀಪದ ಚನ್ನಬಸವೇಶ್ವರ ಶಾಲೆಯಲ್ಲಿ ಮಕ್ಕಳಿಗೆ ಹಾಲು ನೀಡಿದರು. ಅಲೆಮಾರಿ ಸಮುದಾಯದ ನೂರಕ್ಕೂ ಹೆಚ್ಚು ಮಕ್ಕಳು ಹಾಲು ಕುಡಿದು ಶ್ರೀಗಳ ಆಶೀರ್ವಾದ ಪಡೆದರು.
ಬಳಿಕ ಮಾತನಾಡಿದ ಅವರು 24 ವರ್ಷಗಳಿಂದ ಕಲ್ಲ ನಾಗರಕ್ಕೆ ಹಾಕುವ ಹಾಲನ್ನು ಮಕ್ಕಳಿಗೆ ನೀಡುತ್ತಾ ಬರಲಾಗಿದೆ. ಪ್ರತಿವರ್ಷ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಹಾಲು ಕುಡಿಸುತ್ತಿದ್ದೇವೆ. ಕಳೆದ ವರ್ಷ ಸಿದ್ಧಾರೂಢ ಮಠದ ಅಂಧ ಮಕ್ಕಳ ಶಾಲೆಯ ಚಿಣ್ಣರಿಗೆ ಹಾಲು ನೀಡಿದ್ದೆವು. ಈ ಬಾರಿ ಕೋವಿಡ್ ಕಾರಣ ಶಾಲೆಗಳು ತೆರೆದಿಲ್ಲ. ಹೀಗಾಗಿ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲು ನೀಡಿ ನಾಗಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.