ಹುಬ್ಬಳ್ಳಿ : ಕಾಂಗ್ರೆಸನ್ನು ಯಾರು ಅಳಿಸಲು ಸಾಧ್ಯವಿಲ್ಲ. ಮತ್ತೆ ಪುಟ್ಟಿದೆದ್ದು ದೇಶ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು
ನಗರದ ಗೋಕುಲ ಗಾರ್ಡನದಲ್ಲಿ ಮಧು ಬಂಗಾರಪ್ಪ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ದಿ. ಎಸ್.ಬಂಗಾರಪ್ಪ ನನ್ನ ರಾಜಕೀಯ ಗುರು ಅವರ ಗರಡಿಯಲ್ಲಿ ನಾವು ಬೆಳೆದವರು. ಅವರ ಪುತ್ರನನ್ನು ನನ್ನ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ
ಸೇರ್ಪಡೆಗೊಳಿಸುತ್ತಿರುವುದು ಖುಷಿ ತಂದಿದೆ. ಮಧು ಬಂಗಾರಪ್ಪ ಅವರು ವ್ಯಕ್ತಿ ಅಲ್ಲ ಅವರೊಬ್ಬ ಶಕ್ತಿಯಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಅವರ ತಂದೆ ಎಸ್.ಬಂಗಾರಪ್ಪ ಸಿಎಂ ಆಗಿದ್ದಾಗ ರಾಜ್ಯದ ಜನತೆಗೆ ತಲುಪುವ ಜನಪರ ಯೋಜನೆ ತಂದು ಮನೆ ಮನ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಗಾರಪ್ಪ ಅವರ ದೊಡ್ಡ ಅನುಯಾಯಿಗಳು ರಾಜ್ಯಾದ್ಯಂತ ಇದ್ದು, ಅವರನ್ನು ಕಾಂಗ್ರೆಸ್ ಪಕ್ಷ ಸೇರಿಸುವ ಕೆಲಸವನ್ನು ಮಧು ಬಂಗಾರಪ್ಪ ಅವರು ಮಾಡಬೇಕು ಎಂದರು.
ಇನ್ನು, ಕಾಂಗ್ರೆಸ್ ವಿಭಾಗಮಟ್ಟದಲ್ಲಿ ಯುವಕರಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಕಾರ್ಯಕರ್ತರು ಪ್ರತಿದಿನ ಹೊಸಬರನ್ನು ಪಕ್ಷಕ್ಕೆ ಸೇರ್ಪಡೆ ಮಾಡಬೇಕು. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗುರಿ 120 ಕ್ಷೇತ್ರ ಬದಲು 224 ಕ್ಷೇತ್ರ ಆಗಬೇಕು ಆ ಹಿನ್ನೆಲೆಯಲ್ಲಿ ಎಲ್ಲರೂ ಪಕ್ಷಕ್ಕಾಗಿ ದುಡಿಯಬೇಕು ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ದಿ.ಎಸ್ ಬಂಗಾರಪ್ಪ ಅವರು ಯಾವುದೇ ಒಂದು ಜಾತಿ ನಾಯಕ, ಕೇವಲ ಶಿವಮೊಗ್ಗಕ್ಕೆ ಸೀಮಿತ ಆಗಿರಲಿಲ್ಲ. ಅವರೊಬ್ಬ ರಾಜ್ಯದ ನಾಯಕರಾಗಿದ್ದರು. ಅವರಂತೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಅಂತ್ಯದ ಬೆನ್ನಲ್ಲೇ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಆಗಿ ಹೊಸ ಯುವ ಪ್ರಾರಂಭಕ್ಕೆ ಕಾರಣವಾಗಿದ್ದಾರೆ. ಅವರ ಭವಿಷ್ಯ ಚೆನ್ನಾಗಿರಬೇಕು ಎಂದರು.
ಮಧು ಬಂಗಾರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ತುಂಬು ಮನಸ್ಸಿಂದ ನನ್ನ ಅಪಾರ ಪ್ರಮಾಣದ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಸೇರ್ಪಡೆ ಆಗಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ಅದನ್ನು ಸಮರ್ಥವಾಗಿ ನಿಭಾಯಿಸುವೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಆರ್.ಪಾಟೀಲ, ಎಐಸಿಸಿ ಕಾರ್ಯದರ್ಶಿ ಮಧು ಯಾಕ್ಷಿಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಹಿರಿಯ ನಾಯಕ ಕೆ.ಹೆಚ್.ಮುನಿಯಪ್ಪ, ಹೆಚ್.ಕೆ.ಪಾಟೀಲ, ಅಲ್ಲಂ ವೀರಭದ್ರಪ್ಪ, ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಮುಂತಾದವರು ಇದ್ದರು.