ಹುಬ್ಬಳ್ಳಿ : ಜಿಲ್ಲೆಯಲ್ಲಿ ಕೊರೋನಾದ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲಾಗಿದೆ. ಸಂಭವನೀಯ ಮೂರನೆ ಅಲೆ ಕುರಿತು ತಜ್ಞರ ಸಮಿತಿ ಎಚ್ಚರಿಕೆ ನೀಡುತ್ತಿದೆ. ಜಿಲ್ಲಾಡಳಿತದಿಂದ ಮೂರನೆ ಅಲೆ ಎದುರಿಸಲು ಸಲಕ ಸಿದ್ದತೆ ಕೈಗೊಳ್ಳಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ ನಲ್ಲಿ ಕೋವಿಡ್ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕೋವಿಡ್ ಮಾಹಿತಿ ಪಡೆದು ಮಾತನಾಡಿದರು.
ಜಿಲ್ಲೆಯ ಕೋವಿಡ್ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಸಕ್ರಿಯ ಪ್ರಕರಣಗಳನ್ನು 267 ಇವೆ. ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ, ಪೊಲೀಸ್, ಆರೋಗ್ಯ, ಕಿಮ್ಸ್, ಗ್ರಾಮೀಣಾಭಿವೃದ್ಧಿ, ಮಹಾನಗರ ಪಾಲಿಕೆ ಸೇರಿದಂತೆ ಇತರೆ ಇಲಾಖೆಗಳು ಶ್ರಮಿಸಿವೆ. ಎಲ್ಲರ ಕಾರ್ಯ ಅಭಿನಂದನಾರ್ಹವಾಗಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ದಕ್ಷತೆಯಿಂದ ಕೆಲಸ ನಿರ್ವಹಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳವಾಗುತ್ತಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುವವರ ಮೇಲೆ ನಿಗಾ ಇಡಿ. ಎರಡನೇ ಅಲೆಯ ಸಂದರ್ಭದಲ್ಲಿ ಹಲವು ಸಂಸ್ಥೆಗಳು ಸಾರ್ವಜನಿಕ ಹೊಣೆಗಾರಿಕೆ ನಿಧಿಯಡಿ ಆಕ್ಸಿಜನ್ ಕಾನ್ಸಟ್ರೇಟರ್ಸ್ ಒದಗಿಸಿದ್ದಾರೆ. ಇವುಗಳು ಎಲ್ಲಾ ಆಸ್ಪತ್ರೆಗಳಿಗೆ ನೀಡಲಾಗಿದೆ. ಇವುಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದರು.
*ಕೋವಿಡ್ ಸೋಂಕಿತರ ಪ್ರಮಾಣ ಇಳಿಕೆ : ವ್ಯಾಪಕ ಲಸಿಕಾಕರಣ*
ಜಿಲ್ಲೆಯ ಕೋವಿಡ್ ಸೋಂಕಿನ ಪ್ರಮಾಣ 0.5 ಕ್ಕೆ ಕುಸಿತ ಕಂಡಿದೆ. ಜಿಲ್ಲೆಯಲ್ಲಿ ಪ್ರತಿದಿನ 10 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇದುವರೆಗೂ 6,54,356 ಜನರು ಲಸಿಕೆ ಪಡೆದುಕೊಂಡಿದ್ದಾರೆ. ಜಿಲ್ಲಾ ಆಸ್ಪತ್ರೆ, ಕಿಮ್ಸ್, ಚಿಟಗುಪ್ಪಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿದಿನ ಲಸಿಕೆ ನೀಡಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ಕಾಲೇಜುಗಳಲ್ಲಿ ಲಸಿಕಾ ಅಭಿಯಾನ ಆಯೋಜಿಸಲಾಗುತ್ತಿದೆ. ಜಿಲ್ಲೆಯ 14,68,159 ಜನರಿಗೆ ಲಸಿಕೆ ನೀಡಬೇಕಾಗಿದ್ದು ಒಟ್ಟು 34 ಲಕ್ಷಕ್ಕೂ ಅಧಿಕ ಲಸಿಕೆ ಬೇಕಾಗಿದೆ. ಇದುವರೆಗೂ ಲಸಿಕೆ ಪಡೆದವರಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಲಸಿಕೆ ಪಡೆದ 874 ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಆದರೆ ಲಸಿಕೆ ಪಡೆದವರೆಗೆ ಹೆಚ್ಚಾಗಿ ಕೋವಿಡ್ ಬಾದಿಸಿಲ್ಲ. ಧಾರವಾಡ ಹಾಗೂ ಹುಬ್ಬಳ್ಳಿ ನಗರದ ಪ್ರದೇಶಗಳಲ್ಲಿ ಲಸಿಕಾ ಅಭಿಯಾನ ಚುರುಕಾಗಿದ್ದು ಹೆಚ್ಚಿನ ಜನರು ಲಸಿಕೆ ಪಡೆದಿದ್ದಾರೆ.
*ಮಕ್ಕಳಿಗಾಗಿ 750 ಬೆಡ್‌ಗಳು ಮೀಸಲು*
ಕೋವಿಡ್ ಮೂರನೆ ಅಲೆಯು ಮಕ್ಕಳಿಗೆ ಹೆಚ್ಚಾಗಿ ಬಾಧಿಸುವ ಸಂಭವವಿದೆ. ತಜ್ಞರ ಸಮಿತಿ ಜಿಲ್ಲೆಯ 500 ಮಕ್ಕಳು ಕೋವಿಡ್ ನಿಂದ ತೀವ್ರತರನಾಗಿ ಬಾಧಿತರಾಗಬಹುದು ಎಂಬ ವರದಿ ನೀಡಿದೆ. ಈ ಹಿನ್ನೆಯಲ್ಲಿ ಜಿಲ್ಲೆಯಲ್ಲಿ 750 ಬೆಡ್‌ಗಳನ್ನು ಮಕ್ಕಳಿಗಾಗಿ ಸಿದ್ದಪಡಿಸಲಾಗಿದೆ. ಕಿಮ್ಸ್ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರ ಕಟ್ಟಡ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಆಗಸ್ಟ್ 15 ರ ವೇಳೆಗೆ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವುದು. ಇದರಿಂದ ಕಿಮ್ಸ್ ಒಂದರಲ್ಲೇ 600 ಬೆಡ್‌ಗಳು ಮಕ್ಕಳಿಗೆ ಲಭಿಸಲಿವೆ. ಧಾರವಾಡ ಹಾಗೂ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗಳಲ್ಲೂ ಮಕ್ಕಳಿಗಾಗಿ ಬೆಡ್‌ಗಳಿವೆ. ಇದುವರೆಗೂ ಮೂರು ಬಾರಿ ಮಕ್ಕಳ ತಜ್ಞರ ಸಭೆ ನಡೆಸಲಾಗಿದೆ.
*ಕೋವಿಡ್ ನಿರ್ವಹಣೆಗಾಗಿ 20 ಕೋಟಿ ಅನುದಾನ ಬಿಡುಗಡೆ ಬೇಡಿಕೆ*
ಕೊರೋನಾ ಮೊದಲ ಹಾಗೂ ಎರಡನೇ ಅಲೆ ನಿರ್ವಹಣೆಗಾಗಿ ಇದುವರೆಗೆ ಅಂದಾಜು 20 ಕೋಟಿ ರೂಪಾಯಿ ವ್ಯಯವಾಗಿದೆ. ಸದ್ಯ ಹಾಗೂ ಮಂದಿನ ನಿರ್ವಹಣೆಗಾಗಿ 20 ಕೋಟಿ ರೂಪಾಯಿಗಳು ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಭೆಯಲ್ಲಿ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ 23 ಸಾವಿರ ಕೋಟಿ ರೂಪಾಯಿಗಳನ್ನು ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಹೆಚ್ಚಳಕ್ಕಾಗಿ ಮೀಸಲಿರಿಸಿದೆ. ಇದರಲ್ಲಿ ರಾಜ್ಯಕ್ಕೆ 1500 ಕೋಟಿ ರೂಪಾಯಿಗಳು ಲಭಿಸಬಹುದು. ಜಿಲ್ಲೆಯ ಆಸ್ಪತ್ರೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳ ಕುರಿತಾದ ಪ್ರಸ್ತಾವನೆ ಹಾಗೂ ಯೋಜನೆಗಳನ್ನು ಸಿದ್ದಪಡಿಸಿ. ಇವುಗಳನ್ನು ಅಗತ್ಯ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಅನುದಾನ ಪಡೆಯಬಹುದು ಎಂದು ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಕಿಮ್ಸ್ 71 ಕೋವಿಡ್ ಸೋಂಕಿತರಿಗೆ ಚಿಕಿತ್ಸೆ, 106 ಬ್ಲಾಕ್ ಫಂಗಸ್ (ಮ್ಯೂಕರ್ ಮ್ಯೂಕಸ್) ರೋಗಿಗಳು ದಾಖಲು*
ಹುಬ್ಬಳ್ಳಿ ಕಿಮ್ಸ್ ನಲ್ಲಿ 29 ಕೋವಿಡ್, 42 ಸಾರಿ(SARI) ಗುಣಲಕ್ಷಣ ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ 230 ಬ್ಲಾಕ್ ಫಂಗಸ್ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ 106 ಬ್ಲಾಕ್ ಫಂಗಸ್ ರೋಗಿಗಳು ಕಿಮ್ಸ್ ನಲ್ಲಿ ದಾಖಲಾಗಿದ್ದಾರೆ.