ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಸಿಎಂ ಸ್ಪಷ್ಟಪಡಿಸಿದ್ದು, ಹೀಗಾಗಿ ಸದ್ಯ ಯಾವುದೇ ಸಂಪುಟ ವಿಸ್ತರಣೆ ಕಾರ್ಯ ನಡೆಯುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಅಂಬರೀಶ್ ಹಾಗೂ ಕುಮಾರಸ್ವಾಮಿ ವಿಚಾರವಾಗಿ ಮತ್ತೆ ಇದೀಗ ಮಾತನಾಡುವುದು ಸೂಕ್ತವಲ್ಲ. ಈಗಾಗಲೇ ಅವರು ಶಾಂತಿ ಮಾಡಿಕೊಂಡಿದ್ದು, ಮತ್ತೆ ಪರಸ್ಪರವಾಗಿ ಮಾತಾಡುವುದಿಲ್ಲ ಎಂದಿದ್ದಾರೆ. ರಮೇಶ ಜಾರಕಿಹೊಳಿ ರಾಜೀನಾಮೆ ನೀಡುವುದಿಲ್ಲ, ಅವರು ಸಮಾಧಾನ ಆಗಿರುವುದು ಎಂಬುದು ಉತ್ತಮ ಬೆಳವಣಿಗೆ, ಸಿಎಂ ಬದಲಾವಣೆ ವಿಷಯವನ್ನು ಪಕ್ಷದ ವರಿಷ್ಠರು ಗಮನಹರಿಸುವರು ಎಂದರು.
ಬಿಯಾಂಡ್ ಬೆಂಗಳೂರುಗೆ ಒತ್ತು: ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವನ್ನು ಅನುಷ್ಟಾನ ಮಾಡಲು ತಯಾರಿ ಮಾಡುವುದು, ಪ್ರಮುಖವಾದ ಸಂಸ್ಥೆಗಳ ಜೊತೆ ಮಾತುಕತೆ ಮಾಡುವುದು, ಲಸಿಕೆ ಕಾರ್ಯಕ್ರಮ ಹೇಗೆ ನಡೆಯುತ್ತದೆ ಎಂಬುದು, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯವಾಗಿ ಬಿಯಾಂಡ್ ಬೆಂಗಳೂರು ಮೂಲಕ ಯಾವ ರೀತಿ ಕರ್ನಾಟಕ ಡಿಜಿಟಲ್ ಎಕಾನಾಮಿ ಮಷಿನ್ ಮತ್ತು ನಮ್ಮ ಕಿಟ್ಸ್ ಮೂಲಕ ಹೊಸ ಉದ್ಯಮ ಬೆಳೆಸಲು ಪ್ರೇರೆಪಿಸುವ ಕೆಲಸ ಮತ್ತು ಕೌಶಲ್ಯ ಹೆಚ್ಚಿಸುವ ಕೆಲಸ ಮಾಡಲಾಗುವುದು. ಈ ಬಗ್ಗೆ ಎಲ್ಲ ಇಲಾಖೆಯ ಅಧಿಕಾರಗಳ ಜೊತೆಗೆ ಚರ್ಚಿಸಲಾಗುವುದು. ಇದಲ್ಲದೇ ಆಯಾ ಕೇಂದ್ರಗಳಿಗೆ, ಸ್ಥಳಗಳಿಗೆ ಹೋಗಿ ಮಾತಾಡುವುದು ಎಂದರು.
