ಹುಬ್ಬಳ್ಳಿ: ಮಹಾಮಾರಿ ಕೊರೋನಾ ವಿರುದ್ಧ ಹೋರಾಟ ನಡೆಸಲು ಲಸಿಕೆ ಪಡೆಯುವುದೇ ಪರಿಣಾಮಕಾರಿ ಅಸ್ತ್ರವಾಗಿದ್ದು, ಪ್ರತಿಯೊಬ್ಬರೂ ಲಸಿಕೆ ಪಡೆದು ಕೊರೋನಾ ವಿರುದ್ಧ ಜಯ ಸಾಧಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
ಮಂಗಳವಾರ ಇಲ್ಲಿನ ವಾರ್ಡ್ ನಂ.62ರಲ್ಲಿ ಬರುವ ನವ ಅಯೋಧ್ಯಾನಗರದ ಕಕ್ಕಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ “ಕೋವಿಡ್ ಲಸಿಕಾ ಅಭಿಯಾನ” ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಲಸಿಕೆಯ ಸ್ಥಿತಿಗತಿ ಬಗ್ಗೆ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಲಸಿಕೆ ಪಡೆಯಲು ಯಾವುದೇ ಹಿಂಜರಿಕೆ ಬೇಡ ಎಂದು ಜನರಲ್ಲಿ ಮನವಿ ಮಾಡಿದರು.
ಲಸಿಕೆಯ ಮಹತ್ವದ ಬಗ್ಗೆ ಹೆಚ್ಚಿನ ಜನಜಾಗೃತಿ ಮೂಡಿಸಿ, ಕ್ಷೇತ್ರದ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತಾಗಬೇಕು ಎಂದ ಶಾಸಕರು, ಲಸಿಕೆಯ ಅಲಭ್ಯತೆ ಬಗ್ಗೆ ತಿಳಿಸಿದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಚರ್ಚಿಸಿ ಕೂಡಲೇ ಲಸಿಕೆ ತರಿಸಿ, ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
ಸ್ಥಳೀಯ ಮುಖಂಡರಾದ ವಾಸುದೇವ ನಾರಾಯಣಕರ, ಶಿವಾನಂದ ನಾರಾಯಣಕರ, ಸುಭಾಷ್, ಮೋಹನ ಕರಾಟೆ, ಕೃಷ್ಣಾ ಕರಾಟೆ, ಮೈಲಾರಿ ಹೊಸಮನಿ, ಪರಶುರಾಮ ಕಾಳೆ, ಬಸವರಾಜ, ಅಣ್ಣಪ್ಪ, ಅರುಣ ಕದಂ, ಶಕೀಲ ಮಸಳಿ, ವೈದ್ಯಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಇತರರು ಇದ್ದರು.