ಹುಬ್ಬಳ್ಳಿ: ಕೊರೋನಾ ಮಹಾಮಾರಿ ಜಿಲ್ಲಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಭ್ಯವಿರುವ ಆಕ್ಸಿಜನ್ ಬೆಡ್, ವೆಂಟಿಲೇಟರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಲಭ್ಯತೆ ಸೇರಿದಂತೆ ಇನ್ನಿತರೆ ವಿಷಯ ಕುರಿತು ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ ಹಾಗೂ ಕುಸುಮಾವತಿ ಶಿವಳ್ಳಿ ಅವರು ಗುರುವಾರ ಜಿಲ್ಲಾಧಿಕಾರಿ ಜೊತೆ ಮಹತ್ವದ ಸಭೆ ನಡೆಸಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ಕಿಮ್ಸ್ ನಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ಸ್ ಕೊರತೆ ಬಗ್ಗೆ ಪ್ರತಿನಿತ್ಯ ರೋಗಿಗಳು ಹಾಗೂ ಸಂಬಂಧಿಕರಿಂದ ದೂರು ಕರೆಗಳು ಬರುತ್ತಿದ್ದು, ಯಾವ ಆಸ್ಪತ್ರೆಗೆ ಕರೆ ಮಾಡಿದರೂ ಬೆಡ್ ಇಲ್ಲ ಎಂಬ ಉತ್ತರ ಬರುತ್ತಿದೆ. ಜಿಲ್ಲೆಯಲ್ಲಿ ಒಟ್ಟಾರೆ ಎಷ್ಟು ಬೆಡ್ ಗಳಿವೆ, ಕಿಮ್ಸ್ ನಲ್ಲಿ ಆಕ್ಸಿಜನ್ ಬೆಡ್, ವೆಂಟಿಲೇಟರ್ಸ್ ಸೇರಿದಂತೆ ಇನ್ನಿತರೆ ಸೌಲಭ್ಯ ಹೆಚ್ಚಳಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.
ಇದಕ್ಕುತ್ತರಿಸಿದ ಜಿಲ್ಲಾಧಿಕಾರಿ ನಿತೀಶ ಪಾಟೀಲ್, ಜಿಲ್ಲೆಯಲ್ಲಿ ಪ್ರಸ್ತುತ 2236 ಕೋವಿಡ್ ಪ್ರಕರಣಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿವೆ. ಅವುಗಳಲ್ಲಿ 1830 ಸ್ಥಳೀಯವಾಗಿದ್ದರೆ, 406 ಅನ್ಯ ಜಿಲ್ಲೆಯ ಕೋವಿಡ್ ಪ್ರಕರಣಗಳಾಗಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 1600 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 1500 ಒಟ್ಟು 3100 ಬೆಡ್ ಗಳಿವೆ. 185 ವೆಂಟಿಲೇಟರ್ಸ್ ಹಾಗೂ 373 ಐ.ಸಿ.ಯು. ಬೆಡ್ ಗಳಿವೆ. ಕಿಮ್ಸ್ ನಲ್ಲಿ 20 ಕಿಲೋ ಲೀಟರ್ ಸಾಮರ್ಥ್ಯದ 2 ಆಕ್ಸಿಜನ್ ಸಂಗ್ರಹ ಸಾಮರ್ಥ್ಯವಿದ್ದು, 15 ಟನ್ ಮಾತ್ರ ಆಕ್ಸಿಜನ್ ಪೂರೈಸಲಾಗುತ್ತಿದೆ. ಜಿಲ್ಲೆಗೆ ಒಟ್ಟು 45 ಟನ್ ಆಕ್ಸಿಜನ್ ಅವಶ್ಯವಿದ್ದು, ಸರ್ಕಾರದಿಂದ 41 ಟನ್ ಮಾತ್ರ ಮಂಜೂರಾಗಿದೆ. ಉಳಿದುದನ್ನು ಸ್ಥಳೀಯವಾಗಿ ಹೊಂದಿಸಿಕೊಂದು ಆಕ್ಸಿಜನ್ ಕೊರತೆಯುಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಲಭ್ಯತೆ ಆಧಾರದಲ್ಲಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ ಎಂದರು.
ಕಿಮ್ಸ್ ನಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಅಲ್ಲದೇ, ಖಾಸಗಿ ಆಸ್ಪತ್ರೆಗಳಲ್ಲೂ ಸಹ ಕೋವಿಡ್ ರೋಗಿಗಳಿಗೆ ಶೇ. 50 ಬೆಡ್ ಮೀಸಲಿಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ 10 ರಿಂದ 11 ಲಕ್ಷ ರೂ.ವರೆಗೂ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿದ್ದು, ಇದಕ್ಕೆ ಅಗತ್ಯ ಕಡಿವಾಣ ಹಾಕಬೇಕು. ಸರ್ಕಾರಿ ಸೌಲಭ್ಯದಡಿ ದಾಖಲಾಗುವ ರೋಗಿಗಳ ಸಂಪೂರ್ಣ ವೆಚ್ಚವನ್ನು ಸರ್ಕಾರದಿಂದಲೇ ಭರಿಸಬೇಕು ಎಂದು ಸಲಹೆ ನೀಡಿದ ಶಾಸಕರು,
ಆಕ್ಸಿಜನ್ ಪೂರೈಕೆ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಈಗಿರುವ ಬೆಡ್ ಪ್ರಮಾಣವನ್ನು ಕಡಿಮೆ ಮಾಡುವಂತೆ ತಾವು ಸೂಚಿಸಿರುವುದೇಕೆ ಎಂದು ಶಾಸಕರು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಲಭ್ಯವಿರುವ ಆಕ್ಸಿಜನ್ ಕಾನ್ಸಂಟ್ರೇಟರ್ ಗಳು, ಕಿಮ್ಸ್ ನಲ್ಲಿ ಕೋವಿಡ್ ರೋಗಿಗಳಿಗೆ ಸಮರ್ಪಕವಾಗಿ ಆಹಾರ ವಿತರಣೆ ಮಾಡುತ್ತಿರುವ ಬಗ್ಗೆ ಹಾಗೂ ಗುತ್ತಿಗೆ ಆಧಾರಿತ ಸಿಬ್ಬಂದಿ ನೇಮಕಾತಿಗೆ ಕೈಗೊಂಡ ಕ್ರಮದ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಿದ ಶಾಸಕರು, ಒಂದೊಮ್ಮೆ ಹೆಚ್ಚುವರಿಯಾಗಿ ವೆಂಟಿಲೇಟರ್ಸ್ ಬಂದರೆ ಅವುಗಳನ್ನು ನಿರ್ವಹಣೆ ಮಾಡಲು ಸಿಬ್ಬಂದಿ ಕೊರತೆ ಎದುರಾಗಲಿದ್ದು, ಕೂಡಲೇ ಅಗತ್ಯ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವಂತೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಿಯೂ ಸಿಬ್ಬಂದಿ ಕೊರತೆಯಾಗದಂತೆ ಅಗತ್ಯ ಕ್ರಮ ವಹಿಸುವಂತೆ ಸಲಹೆ ನೀಡಿದರು.
ಆಕ್ಸಿಜನ್ ಕೊರತೆಯಿಂದ ಯಾವ ರೋಗಿಗಳು ಸಾಯುವಂತಾಗಬಾರದು. ಆದ್ದರಿಂದ ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್ ಪೂರೈಕೆ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು. ಅಲ್ಲದೇ, ಹೆಚ್ಚುವರಿ ಆಕ್ಸಿಜನ್ ಪೂರೈಕೆ ಮಾಡಿಕೊಳ್ಳುವ ಬಗ್ಗೆಯೂ ಯೋಜನೆ ರೂಪಿಸಬೇಕು ಎಂದ ಶಾಸಕರು, ರಾಜ್ಯದಲ್ಲೇ ಅತಿ ಹೆಚ್ಚು ರೆಮ್ ಡಿಸಿವರ್ ಔಷಧವನ್ನು ಜಿಲ್ಲೆಗೆ ತರಿಸಿಕೊಂಡಿದ್ದಕ್ಕಾಗಿ ಜಿಲ್ಲಾಧಿಕಾರಿಗಳನ್ನು ಅಭಿನಂದಿಸಿದರು.
ಹೆಚ್ಚುತ್ತಿರುವ ಕೊರೋನಾ ಸೋಂಕಿನ ಹಾವಳಿ ತಡೆಯಲು ಎಲ್ಲೆಡೆ ಬಿಗಿ ಲಾಕ್ ಡೌನ್ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಇದನ್ನು ನಾವೂ ಸಹ ಬೆಂಬಲಿಸಿದ್ದು, ಆದರೆ, ತುರ್ತು ಆರೋಗ್ಯ ಸೇವೆಗಾಗಿ ಕೆಲವರು ಆಸ್ಪತ್ರೆ, ಮೆಡಿಕಲ್ ಶಾಪ್ ಗಾಗಿ ಆಚೆ ಬಂದವರ ಮೇಲೂ ಕೆಲವೆಡೆ ಕೇಸು ದಾಖಲಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಇದು ಸರಿಯಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿ ಸೇರಿದಂತೆ ಕಿಮ್ಸ್ ನಿರ್ದೇಶಕರು, ಜಿಲ್ಲಾ ಆರೋಗ್ಯಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಗೆ ಅಗತ್ಯವಾದ ಆಕ್ಸಿಜನ್, ವೆಂಟಿಲೇಟರ್ಸ್, ಆಕ್ಸಿಜನ್ ಕಾನ್ಸಂಟ್ರೇಟರ್ ಕೊರತೆಯಾದಲ್ಲಿ ತಾವೇ ಸ್ವತಃ ಕ್ರಮಕ್ಕೆ ಮುಂದಾಗುವ ಬದಲು ಸರ್ಕಾರಕ್ಕೆ ಮೂಲಸೌಲಭ್ಯಗಳ ಕೊರತೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಿ ತರಿಸಿಕೊಡುವಲ್ಲಿ ನಿಮ್ಮೊಂದಿಗೆ ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಜಿಲ್ಲೆಯ ತಾಲೂಕು ಕೇಂದ್ರಗಳಾದ ಕುಂದಗೋಳ, ಕಲಘಟಗಿ, ನವಲಗುಂದದಲ್ಲಿ 3 ವೆಂಟಿಲೇಟರ್ಸ್ ಗಳಿದ್ದು, ಅವುಗಳು ಸಮರ್ಪಕವಾಗಿ ಬಳಕೆಯಾಗದ ಬಗ್ಗೆ ದೂರುಗಳಿವೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲಿ ವೆಂಟಿಲೇಟರ್ಸ್ ಅಗತ್ಯವಿದೆಯೋ ಅಲ್ಲಿ ಅವುಗಳನ್ನು ಬಳಸಿಕೊಳ್ಳಬೇಕು. ಪ್ರಸ್ತುತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ರಜೆಯಿದ್ದು, ಅಲ್ಲಿನ ಸ್ಟಾಫ್ ನರ್ಸ್ ಗಳನ್ನು ಕೋವಿಡ್ ರೋಗಿಗಳ ಆರೈಕೆಗೆ ಬಳಸಿಕೊಳ್ಳಬೇಕು. ಈ ಮೂಲಕ ಸಿಬ್ಬಂದಿ ಕೊರತೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಮಾತನಾಡಿ, ಅಂಜುಮನ್- ಏ-ಇಸ್ಲಾಂ ಸಂಸ್ಥೆಯ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡಿ ಆಕ್ಸಿಜನ್, ರೆಮ್ ಡಿಸಿವರ್ ಪೂರೈಕೆ ಮಾಡಬೇಕು. ಈಗಾಗಲೇ ಅಂಜುಮನ್ ಸಂಸ್ಥೆಯಿಂದ ಪಿ.ಬಿ. ರಸ್ತೆಯಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಪ್ರಸ್ತುತ ಕಿಮ್ಸ್ ನಿಂದ ಶಿಫಾರಸ್ಸು ಆದ ರೋಗಿಗಳನ್ನು ಮಾತ್ರ ಆರೈಕೆ ಮಾಡಲಾಗುತ್ತಿದ್ದು, 50:50 ಅನುಪಾತದಲ್ಲಿ ಅಂಜುಮನ್ ಸಂಸ್ಥೆ ಆಸ್ಪತ್ರೆ ಶಿಫಾರಸ್ಸು ಮಾಡುವ ರೋಗಿಗಳ ಆರೈಕೆಗೂ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ, ಇತರರು ಇದ್ದರು.